ದಾವಣಗೆರೆ:ಹನ್ನೊಂದನೇ ಶತಮಾನದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಸರ್ವೆ ಕಾರ್ಯ ಇದೇ ಮೊದಲ ಬಾರಿಗೆ ಆರಂಭಗೊಂಡಿದೆ. ಖಡ್ಗ ಸಂಘಟನೆಯ ಸತತ ಎರಡು ವರ್ಷಗಳ ಹೋರಾಟದ ಫಲವಾಗಿ ಈ ಸರ್ವೆ ಕಾರ್ಯ ಶುರುವಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.
ಅಂತೂ ಆರಂಭವಾಯ್ತು ಸೂಳೆಕೆರೆ ಸರ್ವೆ ಕಾರ್ಯ! ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಕೆರೆ ಕರ್ನಾಟಕದ ಪ್ರಾಚೀನ ತಂತ್ರಜ್ಞಾನ ಬಳಸಿ ನಿರ್ಮಾಣಗೊಂಡಿದೆ. ಆದರೆ, 11ನೇ ಶತಮಾನದಿಂದ ಇಲ್ಲಿಯವರೆಗೆ ಈ ಕೆರೆಯ ಸರ್ವೆ ಕಾರ್ಯ ಮಾತ್ರ ನಡೆದಿರಲಿಲ್ಲ. ಚನ್ನಗಿರಿಯವರೇ ಆದ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರೂ ಸಹ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಆದರೀಗ ಸರ್ವೆ ಕಾರ್ಯ ಆರಂಭಗೊಂಡಿದ್ದು, ಇನ್ನು ಮೂರು ವಾರಗಳಲ್ಲಿ ಸರ್ವೆ ಪೂರ್ಣಗೊಳ್ಳುವ ವಿಶ್ವಾಸವಿದೆ.
ಪಾಂಡೋಮಟ್ಟಿಯ ವಿರಕ್ತ ಮಠದ ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದಲೂ ಖಡ್ಗ ಸಂಘಟನೆ ಹಾಗೂ ಸೂಳೆಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸತತ ಹೋರಾಟ ನಡೆಸಿದ ಫಲವಾಗಿ ಈಗ ಸರ್ವೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ನೀರಾವರಿ ನಿಗಮ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಅಧಿಕಾರಿಗಳು ಸರ್ವೆ ಕಾರ್ಯ ಪ್ರಾರಂಭಿಸಿದ್ದಾರೆ.
ಈ ಸರ್ವೆ ಕಾರ್ಯಕ್ಕೆ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ವಿವಿಧ ಮಠಗಳ ಮಠಾಧೀಶರು, ಸುತ್ತಮುತ್ತಲಿನ ಭಾಗದ ರೈತರು, ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಖಡ್ಗ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಇನ್ನು ಸಮಾರಂಭದಲ್ಲಿ ಮಾತನಾಡಿದ ಚನ್ನಗಿರಿಯ ಹಿಮವತ್ ಕೇದಾರ ಶಾಖಾ ಹಿರಿಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಕೆರೆಯ ಸರ್ವೆ ಕಾರ್ಯ ಕೈಗೆತ್ತಿಕೊಂಡಿರುವುದು ಸಂತಸ ತಂದಿದೆ ಎಂದರು.
ಸುಮಾರು 15ರಿಂದ 20 ಹಳ್ಳಿಗಳ ರೈತರು ಈ ಕೆರೆಯ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಇಲ್ಲಿಂದ ಪೂರೈಸಲಾಗುತ್ತದೆ. ಈ ಕೆರೆಯ ಸರ್ವೆ ಆರಂಭವಾಗಿರುವುದರಿಂದ ಎಷ್ಟು ಒತ್ತುವರಿಯಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸಲಿದೆ.
ಈ ಕೆರೆಯು ಚನ್ನಗಿರಿ ತಾಲೂಕಿನ ರೈತರ ಪಾಲಿಗೆ ಆಧಾರವಾಗಿದ್ದು, ಏರಿಯಾ ಅಗಲ ಒಂದೆಡೆ 60 ಅಡಿಯಾದ್ರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿ ಇರುವ ಈ ಕೆರೆಯ ವಿಸ್ತೀರ್ಣ 6460 ಎಕರೆ. ಸಾವಿರಾರು ಎಕರೆ ಒತ್ತುವರಿಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆಯಾದರೂ, ಈಗಾಗಲೇ ಅಡಿಕೆ ತೋಟಗಳನ್ನು ಕೆಲವರು ಕಟ್ಟಿದ್ದಾರೆ. ಮತ್ತೆ ಕೆಲವರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಸ್ವಯಂಪ್ರೇರಿತರಾಗಿ ಒತ್ತುವರಿ ಮಾಡಿರುವ ಸ್ಥಳ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.
ಒಂದು ವೇಳೆ ರೈತರು ಭೂಮಿ ಬಿಟ್ಟುಕೊಡಲು ನಿರಾಕರಿಸಿದರೆ ಕಾನೂನು ಪ್ರಕಾರ ಒತ್ತುವರಿ ಜಾಗ ವಶಪಡಿಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ರೈತರು ಇದಕ್ಕೆ ವಿರೋಧ ಮಾಡದೇ ಬಿಟ್ಟು ಕೊಡುತ್ತಾರೆಂಬ ನಂಬಿಕೆ ಖಡ್ಗ ಸಂಘಟನೆಯವರಲ್ಲಿದೆ. ಜೊತೆಗೆ ಮುಂದಿನ ವರ್ಷ ಕೆರೆಯ ಹೂಳೆತ್ತಲು ಹೋರಾಟ ಮಾಡಲು ಸಹ ಸಮಾರಂಭದಲ್ಲಿ ನಿರ್ಧರಿಸಲಾಗಿದೆ.