ದಾವಣಗೆರೆ:ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಯುವಕನ ತಲೆಗೆ ಪಿಸ್ತೂಲ್ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೂಳೆಕೆರೆ ಗುಡ್ಡದ ಕೊಲೆ ಪ್ರಕರಣ: ಆರೋಪಿಯ ಬಂಧನ - davanagere Crime
ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಯುವಕನ ತಲೆಗೆ ಪಿಸ್ತೂಲ್ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗರಕಟ್ಟೆ ಗ್ರಾಮದ ಯುವಕ ಚೇತನ್ ಬಂಧಿತ ಆರೋಪಿ. ಜುಲೈ 10ರಂದು ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕನ ಕೊಲೆ ಆಗಿದೆ ಎಂದು ಆತನ ಸಹೋದರ ನಾಗರಾಜ್ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಕೊಲೆಗೆ ಬಳಸಿದ್ದ ಪಿಸ್ತೂಲ್ ಮತ್ತು ಐದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಿಸ್ತೂಲ್ ಸಿಕ್ಕಿದಾದರೂ ಹೇಗೆ?
ಧಾರವಾಡದಲ್ಲಿ ಸಂತೋಷ್ ನಾಯ್ಕ ಎಂಬುವರ ಮನೆಯಲ್ಲಿ ಶಸ್ತ್ರ ಪರವಾನಗಿ ಹೊಂದಿದ್ದ ಪಿಸ್ತೂಲನ್ನು ಚೇತನ್ ಕಳ್ಳತನ ಮಾಡಿದ್ದ. ಈ ಸಂಬಂಧ ಧಾರವಾಡದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ನಾಯ್ಕ ಜೂನ್ 21ರಂದು ದೂರು ದಾಖಲಿಸಿದ್ದ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸರನ್ನು ಸಂಪರ್ಕಿಸಿದಾಗ ಇಲ್ಲಿನ ಪೊಲೀಸರಿಗೆ ವಿಷಯ ತಿಳಿದಿದೆ. ಕಳ್ಳತನ ಮಾಡಿದ್ದ ಬಗ್ಗೆ ಸದ್ಯಕ್ಕೆ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಉಳಿದಂತೆ ಬೇರೆ ಬೇರೆ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.