ದಾವಣಗೆರೆ: ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಒಟ್ಟು ಐದು ಸಲ ಆಯ್ಕೆಯಾದ ಅತ್ಯಂತ ಹಿರಿಯ ರಾಜಕಾರಣಿ. ಸಿಎಂ ಗಾದಿ ಬಗ್ಗೆ ಮಾತನಾಡ್ತಾ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡುವಂತೆ ಮಾಡಿದ ಏಕೈಕ ರಾಜಕಾರಣಿ. ಅದಲ್ಲದೆ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅವರಿಗೆ 92 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ದಾವಣಗೆರೆ ದಕ್ಷಿಣದಿಂದ ನಾಲ್ಕನೇ ಬಾರಿ ಅಖಾಡಕ್ಕಿಳಿಯುವ ಮೂಲಕ ಬಿಜೆಪಿ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಇಲ್ಲಿ ಮುಸ್ಲಿಂಮರ ಮತಗಳೇ ಪ್ರಾಬಲ್ಯ. 83 ಸಾವಿರ ಮುಸ್ಲಿಂರ ಮತಗಳಿರುವ ಜಿಲ್ಲೆಯ ಏಕೈಕ ಕ್ಷೇತ್ರ ಅಂದ್ರೆ ಅದು ದಾವಣಗೆರೆ ದಕ್ಷಿಣ ಮತಕ್ಷೇತ್ರ. ಈ ಕ್ಷೇತ್ರ 2008 ರಿಂದ ವಿಂಗಡಣೆ ಆಗಿದ್ದಾಗಲಿಂದಲೂ ಶಾಮನೂರು ಶಿವಶಂಕರಪ್ಪ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಇದೀಗ ಅವರಿಗೆ 92 ವಯಸ್ಸಾಗಿದ್ದರು ಕೂಡ ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹೊರಟಿದ್ದಾರೆ. ಈ ಮುತ್ಸದ್ಧಿ ರಾಜಕಾರಣಿ, ಇಡೀ ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿರುವ ಅಭ್ಯರ್ಥಿಗಳ ಪೈಕಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪನವರೇ ಸೀನಿಯರ್ ಅಭ್ಯರ್ಥಿಯಾಗಿದ್ದಾರೆ.
ಶಾಮನೂರು ರಾಜಕೀಯ ಇತಿಹಾಸ: ಶಾಮನೂರು ಶಿವಶಂಕರಪ್ಪ ಅವರು 1994ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ 64 ನೇ ವಯಸ್ಸಿಯನಲ್ಲಿ ಅಂದರೆ 1994 ರಂದು ಮೊದಲ ಬಾರಿಗೆ ದಾವಣಗೆರೆ ನಗರಸಭೆ ಅಧ್ಯಕ್ಷರಾದರು. ಬಳಿಕ 1994ರಲ್ಲೇ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ವಿಧಾನಸಭೆಗೆ ಆಯ್ಕೆಯಾದರು. ನಂತರ 2004 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 2008 ರಲ್ಲಿ ಕ್ಷೇತ್ರ ವಿಂಗಡಣೆಯಾದಾಗ 2008 ರಿಂದ 2013 ಹಾಗು 2018 ದಾವಣಗೆರೆ ದಕ್ಷಿಣ ಮತ ಕ್ಷೇತ್ರದಿಂದ ಶಾಸಕರಾಗಿ ಒಟ್ಟು ಐದು ಬಾರಿ ಆಯ್ಕೆಯಾಗಿದ್ದಾರೆ. ಇದಲ್ಲದೆ 1997 ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ 1999 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು.
92 ವರ್ಷ ವಯಸ್ಸಾದ್ರು ಚಿರ ಯುವಕರಂತೆ ಚುನಾವಣೆಗೆ ಧುಮುಕಿದ ಹಿರಿಯ ನಾಯಕ:92 ವರ್ಷ ವಯಸ್ಸಾದ್ರು ಕೂಡ ಚಿರ ಯುವಕರಂತೆ ಶಂಕರಪ್ಪನವರು ಮತ್ತೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿ ಅಭ್ಯರ್ಥಿ ಯುವ ನಾಯಕರಾಗಿರುವ ಬಿ ಜಿ ಅಜಯ್ ಕುಮಾರ್ ಅವರ ವಿರುದ್ಧ ತೊಡೆ ತಟ್ಟಿ ಚುನಾವಣಾ ಕಣಕ್ಕೆ ಧುಮುಕಿದ್ದು, ಇಡೀ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸತತವಾಗಿ ಯಶವಂತ್ ರಾವ್ ಜಾಧವ್ ಅವರಿಗೆ ಟಿಕೆಟ್ ಕೊಡ್ತಾ ಬಂದಿದ್ದು, ಅವರು ಸೋಲನ್ನಪ್ಪಿದ್ದರು. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಪಂಚಮಸಾಲಿ ಸಮಾಜದ ಅಸ್ತ್ರವನ್ನು ಬಳಸಿರುವ ಬಿಜೆಪಿ, ಹೊಸ ಮುಖ ಮಾಜಿ ಮೇಯರ್ ಬಿ ಜಿ ಅಜಯ್ ಕುಮಾರ್ ಅವರಿಗೆ ಮಣೆ ಹಾಕಿದೆ.