ದಾವಣಗೆರೆ: ದಾವಣಗೆರೆ ವಿದ್ಯಾರ್ಥಿಗಳ ಬಹುವರ್ಷಗಳ ಕನಸು, ಇದೀಗ ಕೇಂದ್ರ ಸರ್ಕಾರ ನನಸು ಮಾಡಿದೆ. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ದಾವಣಗೆರೆಯಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ 63ನೇ ಉಪಕೇಂದ್ರಕ್ಕೆ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ವರ್ಚುಯಲ್ ಮೂಲಕ ಉದ್ಘಾಟನೆ ಮಾಡಿದರು.
ದಾವಣಗೆರೆ ಈಗಾಗಲೇ ಸಾಕಷ್ಟು ಮುಂದುವರೆದಿರುವ ಪ್ರಮುಖ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಉಪಯೋಗ ಆಗಲಿ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ರಾಜ್ಯದ ಐದನೇ ಎಸ್‌ಟಿಪಿಐ ಉಪ ಕೇಂದ್ರವನ್ನು ಆರಂಭಿಸಲಾಯಿತು.
ಇದನ್ನು ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ವರ್ಚುಯಲ್ ಮೂಲಕ ಚಾಲನೆ ನೀಡಿದರು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಭಾಗಿಯಾಗಿದ್ದರು. ಸದ್ಯ ದಾವಣಗೆರೆ ನಗರದ ಜೆಹೆಚ್ ಪಟೇಲ್ ಬಡಾವಣೆಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ತಾತ್ಕಾಲಿಕವಾಗಿ ಎಸ್‌ಟಿಪಿಐ ರಾಜ್ಯದ ಐದನೇ ಉಪಕೇಂದ್ರ ಆರಂಭವಾಗಿದೆ.
ಸ್ವಂತ ಕಟ್ಟಡದಲ್ಲಿ ಕಚೇರಿ ಮಾಡಲು ಈಗಾಗಲೇ ಬಾತಿ ಗ್ರಾಮದ ಬಳಿ ಎರಡು ಎಕರೆ ಜಮೀನು ನಿಗದಿ ಮಾಡಿದ್ದು ಅಲ್ಲಿ ಎಸ್‌ಟಿಪಿಐಯ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ.