ದಾವಣಗೆರೆ:ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ಗೆ ಚಾಲನೆ ಹಾಗೂ ಅಧಿಕಾರಿಗಳ ಜೊತೆ ಸಭೆ ಇತ್ತು. ಕಾರಿನಿಂದ ಸವದಿ ಇಳಿಯುತ್ತಿದ್ದಂತೆ ಅಧಿಕಾರಿಗಳು, ಕೆಎಸ್ಆರ್ಟಿಸಿ ಸಿಬ್ಬಂದಿ ವರ್ಗ ಡಿಸಿಎಂರನ್ನು ಸ್ವಾಗತಿಸಿದರು. ಈ ವೇಳೆ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರೂ ಕೂಡಾ ನಿಯಮ ಪಾಲಿಸಲಿಲ್ಲ. ಡಿಸಿಎಂ ಅವರನ್ನು ಸ್ವಾಗತಿಸುವಾಗಲೂ ಯಾರೂ ಕೂಡಾ ಅಂತರ ಕಾಯ್ದುಕೊಳ್ಳಲಿಲ್ಲ.
ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಈ ವೇಳೆ ವ್ಯಕ್ತಿಯೊಬ್ಬ ಈಗಿನ ಉಪಮುಖ್ಯಮಂತ್ರಿ ಮುಂದಿನ ಮುಖ್ಯಮಂತ್ರಿ ಸವದೀ ಜೀಗೆ ಜೈ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಅದಕ್ಕೆ ಪ್ರತಿಕ್ರಿಯಿಸದ ಸವದಿ ನಡಿ-ನಡಿ ಎಂದು ಹೇಳುತ್ತಾ ಹೊರಟರು. ಇನ್ನೂ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಕಚೇರಿಯವರೆಗೆ ಬರುವಾಗಲೂ ಅಂತರ ಇಲ್ಲವಾಗಿತ್ತು. ಟೆಂಪ್ರೇಚರ್ ಟೆಸ್ಟ್ ಮಾಡಿದರೂ ಸ್ಯಾನಿಟೈಸರ್ ಹಾಕಿಕೊಳ್ಳದೇ ತೆರಳಿದರು.
ಸಂಸದರಿಗಾಗಿ ಚಾಲನೆ ಮುಂದೂಡಿಕೆ: ಬೆಳಗ್ಗೆ 11 ಗಂಟೆಗೆ ಬಸ್ ಉದ್ಘಾಟನೆ ನಿಗದಿಯಾಗಿತ್ತು. ಆದರೆ ಡಿಸಿಎಂ ಸವದಿ ಬಂದದ್ದು 12.10ಕ್ಕೆ. ಇನ್ನೂ ಸಂಸದ ಜಿ.ಎಂ.ಸಿದ್ದೇಶ್ವರ್ ಆಗಮಿಸದ ಹಿನ್ನೆಲೆ ಆಮೇಲೆ ಚಾಲನೆ ನೀಡುತ್ತೇನೆಂದು ಹೇಳಿ ಹೊರಟರು. ಇದು ಬೆಳಗ್ಗೆಯಿಂದ ಕಾದಿದ್ದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಬೇಸರ ತರಿಸಿತು.