ದಾವಣಗೆರೆ:ಬೆಣ್ಣೆನಗರಿ ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅಗಮಿಸುವ ಸಿದ್ದರಾಮಯ್ಯ ಅಭಿಮಾನಿಗಳಿಗಾಗಿಯೇ ಸವಿಯಲು ಆರು ಲಕ್ಷ ಮೈಸೂರು ಪಾಕ್ ಸಿದ್ಧವಾಗುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡಲು ಕೈ ಪಾಳೆಯದಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮಕ್ಕಾಗಿ ವೇದಿಕೆ ಸಜ್ಜುಗೊಳಿಸಿದೆ. ಐದಾರು ಲಕ್ಷಕ್ಕೂ ಹೆಚ್ಚು ಜನರು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿಯೇ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ಹಾಗೂ ಜನ ಸಾಮಾನ್ಯರಿಗೆ ಉಣ ಬಡಿಸಲು ಬಗೆ-ಬಗೆಯ ತಿಂಡಿಗಳನ್ನು ತಯಾರಿಸಲಾಗುತ್ತದೆ.
150ಕ್ಕೂ ಹೆಚ್ಚು ಬಾಣಸಿಗರು: ಬೆಂಗಳೂರಿನ ಕ್ಯಾಟರಿಂಗ್ನವರಿಗೆ ಊಟದ ಜವಾಬ್ದಾರಿ ವಹಿಸಲಾಗಿದೆ. ನಗರದ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್ನಲ್ಲಿ ಆರು ಲಕ್ಷ ಮೈಸೂರು ಪಾಕ್ ಸಿದ್ಧವಾಗುತ್ತಿವೆ. ಜುಲೈ 28ರಿಂದಲೇ ಮೈಸೂರು ಪಾಕ್ ತಯಾರಿಸಲು 150ಕ್ಕೂ ಹೆಚ್ಚು ಬಾಣಸಿಗರು ನಿಂತಿದ್ದು, ದಿನಕ್ಕೆ ಒಂದರಿಂದ ಎರಡು ಲಕ್ಷದಷ್ಟು ಮೈಸೂರು ಪಾಕ್ ತಯಾರಿಸಲಾಗುತ್ತಿದೆ.
ಈಗಾಗಲೇ ಎರಡೂವರೆ ಲಕ್ಷ ಮೈಸೂರು ಪಾಕ್ ಸಿದ್ಧಪಡಿಸಲಾಗಿದೆ. ತಯಾರಿದ ಮೈಸೂರು ಪಾಕ್ಅನ್ನು ಸುರಕ್ಷಿತವಾಗಿ ರೊಟ್ಟಿನ ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಇಡಲಾಗುತ್ತಿದೆ. ಮೈಸೂರು ಪಾಕ್ ತಯಾರಿಸಲು ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು, 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಸಾಮಗ್ರಿಗಳ ಬಳಸಲಾಗಿದೆ ಎನ್ನುತ್ತಾರೆ ಬಾಣಸಿಗರು.