ದಾವಣಗೆರೆ:ಚಿತ್ರದುರ್ಗದತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠ ತ್ಯಾಗ ವಿಚಾರ ಭುಗಿಲೆದ್ದಿದೆ. ಉತ್ತರಾಧಿಕಾರಿ ನೇಮಕ ಮಾಡುವಂತೆ ಒಂದು ಬಣ ಪಟ್ಟು ಹಿಡಿದಿದ್ದು, ಮತ್ತೊಂದು ಬಣ ಶ್ರೀಗಳ ಬೆಂಬಲಕ್ಕೆ ನಿಂತಿದೆ. ನಗರದಲ್ಲಿ ಇಂದು ಎರಡು ಬಣಗಳ ನಡುವೆ ನಡೆದ ವಾಗ್ವಾದ ತಾರಕಕ್ಕೇರಿತು.
ಶ್ರೀಗಳು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ. ಪೀಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಿಲ್ಲ. ಶಿಕ್ಷಣಕ್ಕೆ ಮಹತ್ವ ನೀಡಿಲ್ಲ. ಭಕ್ತರ ಸಂಪರ್ಕ ಕೂಡ ಕಳೆದುಕೊಂಡಿದ್ದಾರೆ. ಜನರ ಕಷ್ಟ ಕೇಳುತ್ತಿಲ್ಲ. ಕೇವಲ ರಾಜಕೀಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಿಗೆರೆ ಶ್ರೀ ಪೀಠತ್ಯಾಗ ಮಾಡಬೇಕು, ಉತ್ತರಾಧಿಕಾರಿ ನೇಮಕ ಮಾಡಬೇಕು ಎಂದು ಸಮಾಜದ ಮುಖಂಡ ಹಾಗು ಮಾಜಿ ಪರಿಷತ್ ಸದಸ್ಯ ಮುದೇಗೌಡ್ರು ವೀರಭದ್ರಪ್ಪ ಒತ್ತಾಯಿಸಿದರು.
ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎರಡು ಗುಂಪುಗಳ ನಡುವೆ ವಾಗ್ವಾದ:
ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಪೀಠ ತ್ಯಾಗಕ್ಕೆ ಜಾಗೃತಿ ಸಮಿತಿಯವರು ಪತ್ರಿಕಾಗೋಷ್ಠಿ ಮಾಡಿ ಒತ್ತಾಯಿಸಿದ ಬೆನ್ನಲ್ಲೇ ಸಿರಿಗೆರೆ ಶ್ರೀಯವರ ಬೆಂಬಲಿಗರು ಹಾಗೂ ಜಾಗೃತಿ ಸಮಿತಿ ಸದಸ್ಯರ ಮಧ್ಯೆ ವಾಗ್ವಾದ ತಾರಕಕ್ಕೇರಿತ್ತು.
ನಗರದ ಪ್ರೆಸ್ ಕ್ಲಬ್ ಮುಂದೆಯೇ ಈ ವಾಗ್ವಾದ ನಡೆಯಿತು. ನೀವು ಮಠಕ್ಕೆ ಬಂದು ಕೇಳಬೇಕಿತ್ತು, ಪತ್ರಿಕಾಗೋಷ್ಠಿ ಮಾಡಿದ್ದು ತಪ್ಪು ಎಂದು ಶಿವಸೈನ್ಯ ಅಧ್ಯಕ್ಷ, ಹಾಗು ಶ್ರೀಯವರ ಬೆಂಬಲಿಗ ಶಶಿಧರ ಹೆಮ್ಮನಬೇತೂರು ಅವರು ಸಿರಿಗೆರೆ ಶ್ರೀಯವರಿಗೆ ಪೀಠ ತ್ಯಾಗ ಮಾಡುವಂತೆ ತಿಳಿಸಿದ ಜಾಗೃತ ಸಮಿತಿಯವರಿಗೆ ತರಾಟೆಗೆ ತೆಗೆದುಕೊಂಡರು.
ಇನ್ನು ನಡುರಸ್ತೆಯಲ್ಲೇ ಎರಡು ಬಣಗಳು ಆರೋಪ-ಪ್ರತ್ಯಾರೋಪಕ್ಕಿಳಿದು ಬಳಿಕ ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಬಂದರು. ಈ ವಾಗ್ವಾದದ ಬಳಿಕ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದ ಜಾಗೃತಿ ಸಮಿತಿ ಸದಸ್ಯರು ಶ್ರೀಯವರ ಬೆಂಬಲಿಗರಿಗೆ ಸವಾಲು ಹಾಕಿ ನಡೆದರು.