ದಾವಣಗೆರೆ: ಬಿಜೆಪಿಯವರ ಪಾಪದ ಕೊಡ ತುಂಬಿದೆ. ಇವರ ಪಾಪದ ಪುರಾಣವನ್ನು ಜನರ ಮುಂದೆ ತರುವುದೇ ನಮ್ಮ ಉದ್ದೇಶ. ಈ ಸರ್ಕಾರ ಜನರಿಗೆ ಹಾಗೂ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೋಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರಜಾ ಧ್ವನಿ ಬಸ್ ಯಾತ್ರೆ ಮೂಲಕ ಜಿಲ್ಲೆಗೆ ಆಗಮಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿ ದಿನ ಸರ್ಕಾರದ ಕರ್ಮಕಾಂಡ ಬಯಲಿಗೆ ಬರುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಮನೆಗೆ ಹೋಗಲೇಬೇಕು. ಅವರು ಕೇವಲ ಮೂರು ತಿಂಗಳು ಮಾತ್ರ ಅಧಿಕಾರದಲ್ಲಿರುತ್ತಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮಕ್ಮಲ್ ಟೋಪಿ ಹಾಕಿದೆ. 2013 ರಲ್ಲಿ ಆಂಜನೇಯ ಅವರ ನೇತೃತ್ವದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಹಣ ಬಳಕೆ ಮಾಡಿದ ಏಕೈಕ ಸರ್ಕಾರ ಕಾಂಗ್ರೆಸ್. ಅದ್ರೆ, ಬಿಜೆಪಿ ಎಸ್ಇಟಿಪಿ ಫಂಡ್ ಅನ್ನು ಕಡಿಮೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ: ಮೋದಿ ಅವರು ನಾ ಖಾವುಂಗಾ, ನಾ ಖಾನೆದುಂಗಾ ಅಂದ್ರು. ಉಜ್ವಲ ಯೋಜನೆಯಡಿ ಫ್ರೀ ಗ್ಯಾಸ್ ಕೊಡುತ್ತೇವೆ ಎಂದು ಹೇಳುತ್ತಾ ಸಿಲಿಂಡರ್ ಬೆಲೆ ಏರಿಕೆ ಮಾಡಿದರು. ಈಗ ಗ್ಯಾಸ್ ಬೆಲೆ 1,186 ರೂಪಾಯಿ ಆಗಿದೆ. ಇದೇ ಏನ್ರೀ ಅಚ್ಛೇ ದಿನ್ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ವರ್ಷಕ್ಕೆ 24,000 ಕೊಡುತ್ತೇವೆ. ಎಲ್ಲರಿಗೂ ಫ್ರೀ ವಿದ್ಯುತ್ ಎಂದು ಭರವಸೆ ಕೊಟ್ಟರು.
ಹಾಸಿಗೆ ದಿಂಬು ಪ್ರಕರಣ ಸಿಬಿಐಗೆ ಕೊಡಿ: ಧಮ್ಮು, ತಾಕತ್ತು ಇದ್ರೆ ಹಾಸಿಗೆ ದಿಂಬು ಹಗರಣ ಪ್ರಕರಣವನ್ನು ಸಿಬಿಐಗೆ ಕೊಡಿ. ನಾನು ಭಾಗಿಯಾಗಿದ್ರೆ ಜೈಲಿಗೆ ಹೋಗಲು ಸಿದ್ಧ. ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಸಾಬೀತುಪಡಿಸಿ ಅಂತ ಮಾಜಿ ಸಚಿವ ಹೆಚ್.ಆಂಜನೇಯ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಸವಾಲೆಸೆದರು.