ದಾವಣಗೆರೆ :ಪಿಒಪಿ ಗಣೇಶನ ಮೂರ್ತಿಯ ಹಾವಳಿಯಲ್ಲಿ ಪರಿಸರ ಸ್ನೇಹಿ ಗಣೇಶಗಳ ನಿರ್ಮಾಣ ಕಡಿಮೆಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸ್ನೇಹಿ ಗಣೇಶಗಳಿಗೆ ಒತ್ತು ನೀಡಿ ಎಂದು ಕರೆ ನೀಡಿದ ಬೆನ್ನಲ್ಲೇ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ಅನುಪಯುಕ್ತ ನ್ಯೂಸ್ ಪೇಪರ್ನಲ್ಲಿ ಗಣೇಶನ ಮೂರ್ತಿ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಿದ್ದಾರೆ. ಆ ಗಣೇಶನ ಮೂರ್ತಿ ಜನರನ್ನು ಆಕರ್ಷಿಸುತ್ತಿದೆ.
ಬೆಣ್ಣೆ ನಗರಿಯಲ್ಲಿ ಇಂದು ಗಣೇಶನ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಪಿಒಪಿ ಗಣೇಶನ ಮೂರ್ತಿಗಳನ್ನು ಜಿಲ್ಲಾಡಳಿತ ಬ್ಯಾನ್ ಮಾಡಿದ್ದರಿಂದ ಈ ಬಾರಿ ನಗರದಾದ್ಯಂತ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರ ನಡುವೆ ದಾವಣಗೆರೆ ನಗರದ ಸಿದ್ದಗಂಗಾ ಖಾಸಗಿ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಅನುಪಯುಕ್ತ ನ್ಯೂಸ್ ಪೇಪರ್ ಬಳಕೆ ಮಾಡಿ ಗಣೇಶನ ವಿಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ವೀಕ್ಷಿಸಲು ಭಕ್ತರು ಆಗಮಿಸುತ್ತಿದ್ದಾರೆ.
ಈ ಶಾಲೆಯಲ್ಲಿ ಏಳನೇ ವರ್ಷದ ಗಣೇಶೋತ್ಸವ ಆಚರಿಸಿದ್ದು, ಒಟ್ಟು 12 ಅಡಿಯ ಗಣೇಶನ ಮೂರ್ತಿಯನ್ನು ಸಂಪೂರ್ಣವಾಗಿ ಪೇಪರ್ನಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ನಿರ್ಮಿಸಲು 10 ದಿನ ಹಿಡಿದಿದ್ದು, 40 ಕೆಜಿ ಪೇಪರ್ ಬಳಕೆ ಮಾಡಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ. ಗಣೇಶನ ಮೂರ್ತಿ ನಿರ್ಮಾಣಕ್ಕೆ ಮೈದಾ ಗಮ್ ಬಳಸಿದ್ದಾರೆ ಹಾಗೂ ಪರಿಸರಕ್ಕೆ ಹಾನಿ ಮಾಡುವ ಬಣ್ಣವನ್ನು ಇದಕ್ಕೆ ಬಳಕೆ ಮಾಡದೆ ಇರುವುದು ವಿಶೇಷವಾಗಿದೆ.