ದಾವಣಗೆರೆ:ಜೂನ್ ತಿಂಗಳಾಂತ್ಯ ಬಂದರೂ ರಾಜ್ಯದಲ್ಲಿನ್ನೂ ಮುಂಗಾರು ಮಳೆ ಚುರುಕುಕೊಂಡಿಲ್ಲ. ವರುಣ ದೇವನ ಕೃಪೆಗಾಗಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಭಕ್ತರು ಎಡೆ ಜಾತ್ರೆ ಸಮರ್ಪಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸಕಾಲಕ್ಕೆ ಸರಿಯಾಗಿ ಮಳೆಯಾಗದೆ ಇರುವುದರಿಂದ ರೈತರು ಕಂಗಲಾಗಿದ್ದಾರೆ. ಈಗಾಗಲೇ ಗೊಬ್ಬರ, ಬೀತ್ತನೆ ಬೀಜ ಖರೀದಿಸಿರುವ ರೈತರು ಭೂಮಿ ಹದಗೊಳಿಸಿ ವರುಣಾಗಮನಕ್ಕೆ ಕಾಯುತ್ತಿದ್ದಾರೆ. ಆದರೆ ರಾಜ್ಯ ಮುಂಗಾರು ಪ್ರವೇಶ ವಿಳಂಬವಾಗಿದೆ. ಹೀಗಾಗಿ ಜನರು ಮಳೆಗಾಗಿ ಪ್ರಾರ್ಥಿಸಿ ನಗರ ದೇವತೆ ಶ್ರೀ ದುರ್ಗಾಂಬಿಕೆಯ ಮೊರೆ ಹೋಗಿದ್ದಾರೆ.
ಇಲ್ಲಿನ ಶಕ್ತಿ ದೇವತೆ ದುರ್ಗಾಂಬಿಕೆಗೆ ಹೋಳಿಗೆ, ಮೊಸರನ್ನ, ಕಡಬು ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಸಿದ್ದಪಡಿಸಿ ನೈವೇದ್ಯ ಸಮರ್ಪಿಸಿ ಭಕ್ತರು ಎಡೆ ಜಾತ್ರೆ ಆಚರಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆ ಭಾಗವಹಿಸಿದ್ದರು. ಮಳೆ ಇಲ್ಲದೆ ಬರಗಾಲ ಉಂಟಾದ ಸಂದರ್ಭದಲ್ಲಿ ದೇವಾಲಯದ ಕಮಿಟಿಯವರು ಜಾತ್ರೆಯನ್ನು ತಲೆತಲಾಂತರಗಳಿಂದ ಮಾಡುತ್ತಾ ಬಂದಿರುವುದು ವಿಶೇಷ. ಜಾತ್ರೆ ನಡೆದ ಕೆಲವೇ ದಿನಗಳಲ್ಲಿ ಮಳೆಯಾದ ಉದಾಹರಣೆಗಳಿವೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ದೇವಾಲಯದ ಧರ್ಮದರ್ಶಿ ಚನ್ನಬಸಪ್ಪ ಮಾತನಾಡಿ, "1934ರಲ್ಲಿ ದುರ್ಗಾಂಬಿಕಾ ದೇವಿಯನ್ನು ಇಲ್ಲಿ ಪ್ರತಿಸ್ಠಾಪಿಸಲಾಗಿದೆ. ಮಳೆ ಬಾರದೆ ಕಂಗಾಲಾದ ಸಂದರ್ಭದಲ್ಲಿ ದೇವಸ್ಥಾನದ ಎಲ್ಲ ಟ್ರಸ್ಟಿಗಳು ಸೇರಿ ಎಡೆ ಜಾತ್ರೆ ನಡೆಸುತ್ತಿದ್ದೇವೆ. ಜಿಲ್ಲೆಯಾದ್ಯಂತ ಭಕ್ತರು ತಮ್ಮ ಮನೆಗಳಿಂದ ಎಡೆ ಮಾಡಿಕೊಂಡು ಬಂದು ಅ ಎಡೆಯನ್ನು ದೇವರಿಗೆ ಅರ್ಪಿಸಿ ಮಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಎಡೆ ಜಾತ್ರೆಯ ನಂತರವೂ ಮಳೆಯಾಗಲಿಲ್ಲ ಎಂದರೆ ಭಾನುವಾರದಿಂದ ಐದು ವಾರಗಳ ಕಾಲ ಸಂತೆ ಆಯೋಜಿಸಿ ಮಳೆಗಾಗಿ ಪೂಜೆ ಸಲ್ಲಿಸುತ್ತೇವೆ" ಎಂದು ತಿಳಿಸಿದರು.