ಹರಿಹರ:ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಭಜನೆ ಮಾಡುವ ಮೂಲಕ ಮಹಾ ಶಿವರಾತ್ರಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಶಿವರಾತ್ರಿಯ ಜಾಗರಣೆಯ ಪ್ರಯುಕ್ತ ಕ್ಷೇತ್ರಪಾಲಕ ಶ್ರೀ ಹರಿಹರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ 7:30ರಿಂದ ಬೆಳಗಿನ ಜಾವ 5.30ರವರೆಗೆ ನಾರಾಯಣ ಜೋಯಿಸರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ ಮತ್ತು ವಿವಿಧ ಮಹಿಳಾ ಮಂಡಳಿಗಳು ಭಜನೆ ಮಾಡುತ್ತಿರುವ ದೃಶ್ಯ ಕಂಡು ಬಂತು.
ಭರಂಪುರದ 108ಲಿಂಗೇಶ್ವರ, ಜೋಡು ಬಸವೇಶ್ವರ, ಮುರುಘರಾಜೇಂದ್ರ, ಪಕ್ಕಿರಸ್ವಾಮಿ ಮಠ, ಸಂಗಮೇಶ್ವರ, ಬಸವೇಶ್ವರ, ಕಸಬಾ ಮತ್ತು ಮಹಜೇನಹಳ್ಳಿ ಗ್ರಾಮದೇವಿ, ಹುಚ್ಚೇಶ್ವರ ಮಠ, ಶ್ರೀ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದಲ್ಲಿ ಸೇರಿದಂತೆ ವಿಶೇಷ ಪೂಜೆ, ಭಜನೆ ಹಾಗೂ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು.
ಭಕ್ತರ ದಂಡು:ಹರಿಹರೇಶ್ವರ ದೇವಸ್ಥಾನ ಹಾಗೂ ನಗರದ ವಿವಿಧ ಶಿವನ ದೇವಸ್ಥಾನಗಳಲ್ಲಿ ರಾತ್ರಿ 8 ಗಂಟೆಯಿಂದಲೇ ಭಕ್ತರ ದಂಡು ಸರದಿಯ ಸಾಲಿನಲ್ಲಿ ನಿಂತು ಬೆಳಗಿನ ಜಾವದವರೆಗೂ ದೇವರ ದರ್ಶನ ಪಡೆದುಕೊಂಡರು.
ಖರೀದಿ ಭರಾಟೆ:ಹಬ್ಬದ ಪ್ರಯುಕ್ತ ಗುರುವಾರ ಮತ್ತು ಶುಕ್ರವಾರ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ವಿಶೇಷವಾಗಿ ಕಲ್ಲಂಗಡಿ, ಕರಬೂಜಾ, ಖರ್ಜೂರ, ದ್ರಾಕ್ಷಿ, ಸಪೋಟಾ ಹೀಗೆ ವಿವಿಧ ಬಗೆಯ ಹಣ್ಣುಗಳ ತುಸು ದರ ಏರಿಕೆಯಿದ್ದರೂ ಭಕ್ತರು ಹಣ್ಣು ಹಂಪಲಗಳ ಖರೀದಿ ಮಾಡುತ್ತಿರುವುದು ಕಂಡು ಬಂತು.
ತಾಲೂಕಿನ ಹನಗವಾಡಿ, ಗಂಗನರಸಿ, ಉಕ್ಕಡಗಾತ್ರಿ, ಸಾರಥಿ ಗೂತ್ತೂರು, ಕೆ.ಬೇವಿನಹಳ್ಳಿ, ಬನ್ನಿಕೋಡು, ಕೊಕ್ಕನೂರು ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಭಜನೆ ಮಾಡುವ ಮೂಲಕ ಜಾಗರಣೆ ಮಾಡಿ ಹಬ್ಬವನ್ನು ಆಚರಿಸಲಾಯಿತು.
ಪೊಲೀಸ್ ಬಂದೋ ಬಸ್ತ್: ಜಾಗರಣೆ ನಿಮಿತ್ತ ರಾತ್ರಿ ವೇಳೆ ನಗರ ಮತ್ತು ಗ್ರಾಮಾಂತರ ಪ್ರದೇಶದ ವಿವಿಧ ದೇವಸ್ಥಾನಗಳಿಗೆ ಸೂಕ್ತ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಮಾಡಲಾಗಿತ್ತು.