ಕರ್ನಾಟಕ

karnataka

ETV Bharat / state

ಹೈಕೋರ್ಟ್​ ಆದೇಶ: ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ - etv bharat kannada

ಎರಡನೇ ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರಂಟ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆ ಮುರುಘಾ ಶರಣರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

shivamurthy-muruga-sharana-was-released-from-jail-after-the-highc-ourt-order
ಹೈಕೋರ್ಟ್​ ಆದೇಶ: ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ

By ETV Bharat Karnataka Team

Published : Nov 20, 2023, 10:30 PM IST

Updated : Nov 21, 2023, 7:50 AM IST

ವಿರಕ್ತ ಮಠದಲ್ಲಿ ಶಿವಮೂರ್ತಿ ಮುರುಘಾ

ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾರಿ ಮಾಡಿದ್ದ ಜಾಮೀನು ರಹಿತ ವಾರಂಟ್‌ಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಶರಣರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಎರಡನೇ ಫೋಕ್ಸೊ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ವಾಮೀಜಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಪಡೆದ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಶರಣರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ, ಚಿತ್ರದುರ್ಗ ಕಾರಾಗೃಹಕ್ಕೆ ಶ್ರೀ ಅವರನ್ನು ರವಾನೆ ಮಾಡಿಸಲಾಗಿತ್ತು.‌ ಚಿತ್ರದುರ್ಗದ ಸಿಟಿ ಡಿವೈಎಸ್​ಪಿ ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪಿಐ ಮುದ್ದು ರಾಜ್ ನೇತೃತ್ವದಲ್ಲಿ ಸಿಬ್ಬಂದಿ ಶರಣರನ್ನು ಬಂಧಿಸಿದ್ದರು. ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಹೈಕೋರ್ಟ್ ಅವಕಾಶ ನೀಡಿದ್ದರೂ ಮತ್ತೆ ಬಂಧನ ಮಾಡಿರುವ ಕ್ರಮ ಪ್ರಶ್ನಿಸಿ ಮುರುಘಾ ಶರಣರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಅರ್ಜಿದಾರರನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಜೊತೆಗೆ ಆದೇಶದ ಪ್ರತಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಅವರು ತಕ್ಷಣ ಇ-ಮೇಲ್ ಮೂಲಕ ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ರವಾನಿಸಿ ಆದಷ್ಟು ಶೀಘ್ರದಲ್ಲಿ ಬಿಡುಗಡೆಗೆ ಕ್ರಮ ವಹಿಸುವಂತೆ ಸೂಚಿಸಿತ್ತು.

ಮೊದಲ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್​ನ ಏಕಸದಸ್ಯ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗಕ್ಕೆ ಆರೋಪಿ ಪ್ರವೇಶಿಸಬಾರದು ಹಾಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ಮೆಮೊ ಸಲ್ಲಿಸಿದ್ದಾರೆ. ಇದನ್ನು ವಿಶೇಷ ನ್ಯಾಯಾಲಯವು ಪರಿಗಣನೆ ಮಾಡಿದೆ. ಜಾಮೀನು ಮಂಜೂರಾತಿ ವೇಳೆ ಹೈಕೋರ್ಟ್​​ ಏಕಸದಸ್ಯ ಪೀಠಗಳು ಪ್ರತ್ಯೇಕ ಪ್ರಕರಣಗಳಲ್ಲಿ ಮಾಡಿರುವ ಆದೇಶವನ್ನು ವಿಶೇಷ ನ್ಯಾಯಾಲಯ ಪಾಲಿಸಬೇಕು ಎಂದು ​ ಹೇಳಿತ್ತು. ಹೈಕೋರ್ಟ್ ರಿಜಿಸ್ಟ್ರಾರ್ ಕಡೆಯಿಂದ ಆದೇಶದ ಇ-ಮೇಲ್ ಬಂದ ಬಳಿಕ ಶಿವಮೂರ್ತಿ ಮುರುಘಾ ಶರಣರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಶ್ರೀಯವರ ಪರ ವಕೀಲ ಉಮೇಶ್ ಹೇಳಿದ್ದೇನು?: ‘‘ಈ ವೇಳೆ ಶ್ರೀಯವರ ಪರ ವಕೀಲ ಉಮೇಶ್ ಅವರು ಪ್ರತಿಕ್ರಿಯಿಸಿ, "ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ ಆದೇಶ ಆಗಿದೆ. ಚಿತ್ರದುರ್ಗ ನ್ಯಾಯಾಲಯ ಬಂಧಿಸುವಂತೆ ಜಾರಿ ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ‌. ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಪ್ರತಿ ಜೈಲರ್​ಗೆ ಇ -ಮೇಲ್​ ಮೂಲಕ ರವಾನೆ ಆಗಿದೆ. ಪ್ರತಿ ಸಿಕ್ಕ ತಕ್ಷಣ ಅವರನ್ನು ಬಿಡುಗಡೆ ಮಾಡಲಾಗಿದೆ‘‘ ಎಂದು ಮಾಹಿತಿ ನೀಡಿದ್ದಾರೆ.

ಮಠದ ಭಕ್ತ ಹೇಳಿದ್ದೇನು?: ಮಠದ ಭಕ್ತ ಜಿತೇಂದ್ರ ಮಾತನಾಡಿ, "ಮೊದಲನೇ ಪ್ರಕರಣದಲ್ಲಿ ಹೈಕೋರ್ಟ್ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿತ್ತು‌. ಎರಡನೇ ಪ್ರಕರಣಕ್ಕೆ ಬಾಡಿ ವಾರಂಟ್ ಬೇಸ್ ಮೇಲೆ ಫೋಕ್ಸೊ ನ್ಯಾಯಾಲಯ ವಿಚಾರಣೆ ಮಾಡಿ ಬಂಧನ ವಾರಂಟ್ ಜಾರಿ ಮಾಡಿತ್ತು. ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ಪೋಕ್ಸೋ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ನ್ಯಾಯಾಂಗ ಬಂಧನ ಕುರಿತು ಹೈಕೋರ್ಟ್ ನಲ್ಲಿ ಅಪೀಲ್ ಹಾಕಿದ ಬೆನ್ನಲ್ಲೇ ನಮ್ಮ ಮನವಿ ಪುರಸ್ಕರಿಸಿ ತಕ್ಷಣ ಜಾರಿಯಾಗುವಂತೆ ಹೈಕೋರ್ಟ್ ಚಿತ್ರದುರ್ಗ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಮುರುಘಾ ಶರಣರನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದೆ. ಬಂಧನ ಮಾಡಿದ ಆದೇಶವನ್ನು ಸ್ಕ್ವಾಶ್ ಮಾಡಿದೆ" ಎಂದು ಹೇಳಿದರು.

ಇದನ್ನೂ ಓದಿ:ಮಕ್ಕಳ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನಾಗಣ್ಣಗೌಡ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Last Updated : Nov 21, 2023, 7:50 AM IST

ABOUT THE AUTHOR

...view details