ಬಂಧಿತ ಶಿವಾಜಿ ರಾವ್ ಅವರ ಸಹೋದರ ಗುರುರಾಘವೆಂದ್ರ ಜಾಧವ್ ದಾವಣಗೆರೆ: ಸಾಹಿತಿಗಳಿಗೆ ಬೆದರಿಕೆ ಪುತ್ರ ಬರೆದ ಆರೋಪ ಹಿನ್ನೆಲೆಯಲ್ಲಿ ದಾವಣಗೆರೆ ಮೂಲದ ಯುವಕ ಶಿವಾಜಿ ರಾವ್ ಜಾಧವ್ ಎಂಬ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳಿಂದ ಶಿವಾಜಿ ರಾವ್ ಸಾಕಷ್ಟು ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ, ಈತನು ಎಲ್ಲಾ ಸಾಹಿತಿಗಳಿಗೆ ಬರೆಯುತ್ತಿದ್ದ ಪತ್ರಗಳು ಒಂದೇ ರೀತಿಯ ಬರವಣಿಗೆಯಿಂದ ಕೂಡಿರುತ್ತಿದ್ದವು. ಇನ್ನು ದಾವಣಗೆರೆ ಪೋಸ್ಟ್ ಆಫೀಸ್ನಿಂದಲೇ ಪತ್ರಗಳು ಪೋಸ್ಟ್ ಆಗುತ್ತಿದ್ದರಿಂದ, ಇದರ ಜಾಡು ಹಿಡಿದು ಹೊರಟ ಸಿಸಿಬಿ ಪೊಲೀಸರು ಶಿವಾಜಿ ರಾವ್ನನ್ನು ಬಂಧಿಸಿದ್ದಾರೆ.
ಇನ್ನು, ಈ ವಿಚಾರವಾಗಿ ಬಂಧಿತ ಶಿವಾಜಿ ರಾವ್ ಅವರ ಸಹೋದರ ಗುರುರಾಘವೇಂದ್ರ ಜಾಧವ್ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿಂದು ಮಾತನಾಡಿದ ಅವರು, "ಸಹೋದರನ ಬಂಧನದ ಬಗ್ಗೆ ಪೊಲೀಸರು ಮಾಹಿತಿ ನೀಡಿದಾಗ ಮಾತ್ರ ನಮಗೆ ಗೊತ್ತಾಗಿದೆ. ಆತನಿಗೆ ಹಿಂದುತ್ವದ ಬಗ್ಗೆ ಹೆಚ್ಚು ಒಲವು ಇತ್ತು. ಜೊತೆಗೆ ಶಿವಮೊಗ್ಗದಲ್ಲಿ ನಡೆಯುವ ಹಿಂದುತ್ವದ ಕಾರ್ಯಕ್ರಮಕ್ಕೂ ಹೋಗುತ್ತಿದ್ದ. ಆದರೆ, ಸಾಹಿತಿಗಳಿಗೆ ಜೀವ ಬೇದರಿಕೆ ಪತ್ರ ಬರೆದಿದ್ದಾರೆ ಅನ್ನೋದನ್ನು ಕೇಳಿ ನಮಗೆ ಶಾಕ್ ಆಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶಿವಾಜಿ ರಾವ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಹೋದರೆ, ರಾತ್ರಿ ಹತ್ತು ಗಂಟೆಗೆ ಮನೆಗೆ ಬರುತ್ತಿದ್ದ, ಆತನಿಗೆ ಮದುವೆ ಆಗಿಲ್ಲ. ಹಿಂದುತ್ವ ಅಂತಾ ಸುತ್ತಾಡುತ್ತಿದ್ದ. ದಾವಣಗೆರೆ ನಗರದ EWS ಕಾಲೋನಿಯಲ್ಲಿ ವಾಸವಾಗಿದ್ದು, ಈ ತರ ಎಂಬುದು ಈಗ ಗೊತ್ತಾಗಿದೆ ಎಂದು ಶಿವಾಜಿರಾವ್ ಸಹೋದರ ಹೇಳಿದರು.
ತನಿಖೆ ನಡೆಸುವಂತೆ ಸಾಹಿತಿಗಳ ನಿಯೋಗ ಮನವಿ ಮಾಡಿತ್ತು:ದಾವಣಗೆರೆ ಮೂಲದ ಶಿವಾಜಿ ರಾವ್ ಬಂಧನ ಬಳಿಕ ಸಾಹಿತಿಗಳಿಗೆ ಪತ್ರ ಬರೆಯುತ್ತಿದ್ದ ಎಂಬ ಮಾಹಿತಿ ಹೊರಬಂದಿದೆ. ರಾಜ್ಯದ ಕೆಲ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣದ ಆರೋಪಿಯಾದ ಶಿವಾಜಿ ರಾವ್ನನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಹಿಂದೂ ಸಂಘಟನೆ ಕಾರ್ಯಕರ್ತನಾಗಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಸಾಹಿತಿಗಳ ನಿಯೋಗ ಇತ್ತೀಚೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಿತ್ತು. ಅದರಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಎರಡು ವರ್ಷಗಳಿಂದ ಬರೆಯುತ್ತಿದ್ದ ಬೆದರಿಕೆ ಪತ್ರಗಳನ್ನು: ಬಂಧಿತ ಶಿವಾಜಿ ರಾವ್ ಕಳೆದ ಎರಡು ವರ್ಷಗಳಿಂದ ಬೆದರಿಕೆ ಪತ್ರಗಳನ್ನು ಸಾಹಿತಿಗಳಿಗೆ ಬರೆಯುತ್ತಿದ್ದ, ಕುಂ. ವೀರಭದ್ರಪ್ಪ, ಬಿ ಟಿ ಲಲಿತಾ ನಾಯಕ್, ಕೆ ಮರುಳಸಿದ್ದಪ್ಪ, ಡಾ .ಜಿ ರಾಮಕೃಷ್ಣ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಕೆಲ ಸಾಹಿತಿಗಳಿಗೆ ಅನಾಮಧೇಯವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದವು.
'ಡಿಜೆ ಹಳ್ಳಿ - ಕೆಜಿ ಹಳ್ಳಿಯಂಥಹ ಗಲಭೆಗಳ ಬಗ್ಗೆ ಮಾತನಾಡದ ನೀವು ಹಿಂದೂ ಧರ್ಮದ ಕುರಿತು ಅವಹೇಳನ ಮಾಡುತ್ತೀರಿ ಎಂದು ಪತ್ರದಲ್ಲಿ ಉಲ್ಲೇಖಿಸಿ ಬೆದರಿಕೆ ಹಾಕಲಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದವು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು, ಇದೀಗ ಆರೋಪಿ ಶಿವಾಜಿ ರಾವ್ ಬಂಧನವಾಗಿದೆ.
ಇದನ್ನೂ ಓದಿ:ಎರಡು ವರ್ಷಗಳಿಂದ ರಾಜ್ಯದ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಅರೆಸ್ಟ್