ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಕಟ್ಟುವುದೂ ಕೂಡ ಜೋರಾಗಿ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚಿಕ್ಕಗೋಣಿಗೆರೆ ಗ್ರಾಮದಲ್ಲಿ ಡಂಗುರ ಸಾರಿಸಿ ಮುಖಂಡರು ಬೆಟ್ಟಿಂಗ್ಗೆ ಆಹ್ವಾನ ನೀಡಿರುವುದು ಭಾರಿ ಚರ್ಚೆಗೆ ಒಳಗಾಗಿದೆ.
"ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ ಗೆಲ್ಲುತ್ತಾರೆ. ಬೆಟ್ಟಿಂಗ್ ಕಟ್ಟುವವರು ದೇವಸ್ಥಾನದ ಬಳಿ ಬನ್ನಿ" ಎನ್ನುತ್ತಾ ಚಿಕ್ಕಗೋಣಿಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ನಾಗಣ್ಣ ಡಂಗುರ ಸಾರಿಸಿ ಬೆಟ್ಟಿಂಗ್ಗೆ ಆಹ್ವಾನಿಸಿದ್ದಾರೆ. ಬಿಜೆಪಿಯಿಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಶಾಂತನಗೌಡ ಕಣದಲ್ಲಿದ್ದಾರೆ. ಕೈ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಎರಡು ಎಕರೆ ಜಮೀನು ಬೆಟ್ಟಿಂಗ್ ಕಟ್ಟಿರುವ ನಾಗಣ್ಣ, ಯಾರಾದರೂ ಬೆಟ್ಟಿಂಗ್ ಮಾಡುವರಿದ್ದರೆ ಗ್ರಾಮದ ದೇವಸ್ಥಾನದ ಬಳಿ ಬನ್ನಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.
ಎರಡು ಎಕರೆ ಜಮೀನು ಪಣಕ್ಕೆ:ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೂ ಬೆಟ್ಟಿಂಗ್ ಭರಾಟೆ ಜೋರಾಗಿದೆ. ನಾಳೆ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅಭಿಮಾನಿಗಳು ಬಾಜಿ ಕಟ್ಟಲು ಮುಂದಾಗಿದ್ದು, ಕೆಲ ವಿಡಿಯೋಗಳು ವೈರಲ್ ಆಗಿವೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್ ಗೆಲ್ಲುತ್ತಾರೆ ಎಂದು ಹೇಳುತ್ತ, ಎರಡು ಎಕರೆ ಜಮೀನು ಪಣಕ್ಕಿಡಲೂ ಸಿದ್ಧ ಎಂದು ಅಭಿಮಾನಿಯೋರ್ವ ಆಹ್ವಾನಿಸಿರುವ ವಿಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸೋತರೆ, ಎರಡು ಎಕರೆ ಜಮೀನು ನಿಮ್ಮದು. ಬಸವರಾಜ್ ಗೆದ್ದರೆ, ನಿಮ್ಮ ಎರಡು ಎಕರೆ ಜಮೀನು, ತೋಟ ನಮ್ಮದು ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಜೊತೆಗೆ ಮತ್ತೋರ್ವ ಕೂಲಿ ಕಾರ್ಮಿಕ, ನಾನು ಕೂಲಿ ಮಾಡಿ ದುಡಿಮೆ ಮಾಡುತ್ತೇನೆ. ಬಸವರಾಜ್ ಶಿವಗಂಗಾ ಗೆಲ್ಲುತ್ತಾರೆ ಹಣ ನೀಡಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ವ್ಯಕ್ತಿಯೂ ಸವಾಲು ಹಾಕಿದ್ದು, ಶಿವಗಂಗಾ ಬಸವರಾಜ್ ಪರ ಎರಡು ಎಕರೆ ಜಮೀನು ಜೂಜಿಗೆ ಇಟ್ಟಿದ್ದಾರೆ.
200ಕ್ಕೂ ಹೆಚ್ಚು ಬೂತ್‌ಗಳಲ್ಲಿ ನನಗೆ ಲೀಡ್- ಶಾಂತನಗೌಡರು:ಹೊನ್ನಾಳಿ ಮತಕ್ಷೇತ್ರದಲ್ಲಿ ಶಾಸಕ ರೇಣುಕಾಚಾರ್ಯ ಸೋಲಿಗೆ ದುರಾಡಳಿತ, ಭ್ರಷ್ಟಾಚಾರ ಕಾರಣವಾಗಲಿದೆ ಎಂದು ಶಾಂತನಗೌಡರು ಹೇಳಿದ್ದಾರೆ. ಗೊಲ್ಲರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಹಾಗೂ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಕ್ಕೆ ಈ ಸಲ ಜನರು ರೇಣುಕಾಚಾರ್ಯಗೆ ಪಾಠ ಕಲಿಸಲಿದ್ದಾರೆ ಎಂದರು.
ನಾನು, ನಮ್ಮ ಅಪ್ಪ, ಅಣ್ಣ ಎಲ್ಲರೂ ಇಲ್ಲಿಂದ ಶಾಸಕರಾಗಿದ್ದೇವೆ. ಇಡೀ 50 ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲ ಜಾತಿ, ಧರ್ಮದವರ ಪ್ರೋತ್ಸಾಹ ಸಿಕ್ಕಿದೆ. ಪಕ್ಷದ ಗ್ಯಾರಂಟಿ ಕಾರ್ಡ್ ಕೂಡ ನಾನು ಗೆಲ್ಲಲು ಸಹಕಾರಿಯಾಗಲಿದೆ. ಹೊನ್ನಾಳಿ ಮತಕ್ಷೇತ್ರದಿಂದ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇನೆ. ನನ್ನ ಮೇಲೆ ಐಟಿ ದಾಳಿ ನಡೆದಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ವಿರೋಧ ಪಕ್ಷದವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಶಾಂತನಗೌಡರು ಹೇಳಿದರು.
ಇದನ್ನೂಓದಿ:ಕಾಂಗ್ರೆಸ್‌ನವರ ರೆಸಾರ್ಟ್ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್