ದಾವಣಗೆರೆ : 67 ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ಶಾಮನೂರು ಶಿವಶಂಕರಪ್ಪ ಅಭಿಮಾನಿಗಳು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ಎಸ್ ಮಲ್ಲಿಕಾರ್ಜುನ್ ಅಭಿಮಾನಿ ಬಳಗದಿಂದ ಪತ್ರಿಕಾಗೋಷ್ಠಿ ಉದೇಶಿಸಿ ಮಾತನಾಡಿದ ಪದಾಧಿಕಾರಿಗಳು, ಮಾಜಿ ಮಂತ್ರಿಗಳು ಹಾಗೂ ಹಾಲಿ ಶಾಸಕರು ಆಗಿರುವ ಇವರು ರಾಷ್ಟ್ರೀಯ ವೀರಶೈವ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೂ ಸ್ಪಂದಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಹಾಗೂ ಇವರು ಹಿರಿಯ ಮುತ್ಸದ್ದಿಗಳಾಗಿದ್ದು, ರಾಜಕೀಯ ಅನುಭವದ ಆಧಾರದ ಮೇಲೆ ಮೊದಲ ಪ್ರಾಮುಖ್ಯತೆ ಇವರಿಗೆ ನೀಡುವ ಮೂಲಕ 2023ನೇ ಸಾಲಿನಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಇಡೀ ರಾಜ್ಯದಲ್ಲಿ ವೀರಶೈವ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿರುವುದರಿಂದ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಲು ಡಾ ಶಾಮನೂರು ಶಿವಶಂಕರಪ್ಪನವರೇ ಕಾರಣರಾಗಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ನಾಯಕರುಗಳು ಡಾ ಶಾಮನೂರು ಶಿವಶಂಕರಪ್ಪ ಅವರ ಸೇವೆ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನವನ್ನು ಕೊಡುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾಬಿನೆಟ್ ದರ್ಜೆಯ ಉತ್ತಮ ಸ್ಥಾನವನ್ನು ಕೊಡಬೇಕು:ಇನ್ನು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ 36 ರಿಂದ 37 ಜನ ಶಾಸಕರು ಗೆದ್ದಿದ್ದಾರೆ. ಎಲ್ಲ ಸಮಾಜಕ್ಕಿಂತ ವೀರಶೈವ ಸಮಾಜದ ಶಾಸಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಮಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದರು. ಇದಲ್ಲದೇ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಇವರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಉತ್ತಮ ಸ್ಥಾನವನ್ನು ಕೊಡಬೇಕು ಎಂದು ವಿನಂತಿಸಿದರು.