ಇದು ಹಳೆಯ ವರದಿ, ಹೊಸ ಜನಗಣತಿ ಸಮೀಕ್ಷೆಯಾಗಬೇಕಿದೆ: ಶಾಮನೂರು ಶಿವಶಂಕರಪ್ಪ ದಾವಣಗೆರೆ:ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಬಿಡುಗಡೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಕುರಿತು ಅವರು ಮಾತನಾಡಿದರು.
'ಇದು ಹಳೆಯ ವರದಿ ಮತ್ತೆ ಹೊಸದಾಗಿ ಮಾಡಲಿ ಎಂದು ಹೇಳಿದ್ದೇನೆ. ಹೊಸದಾಗಿ ಜನಗಣತಿ ಆಗಬೇಕಿದೆ. ಒಟ್ಟಾರೆ ಹೊಸ ಸಮೀಕ್ಷೆ ಮಾಡಿದರೆ ಸಾಕು ಎಂದು ಹಿರಿಯ ಶಾಸಕ ಹಾಗೂ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದರು. ಇದಕ್ಕೂ ಮುನ್ನ ಗುರುವಾರ ಕೂಡ ಇದೇ ವಿಚಾರವನ್ನು ಮಾತನಾಡಿದ್ದರು. ಈಗ ಮತ್ತೆ ಹೊಸ ಜಾತಿಗಣತಿಯ ಸಮೀಕ್ಷೆಯಾಗಬೇಕೆಂದು ಪುನರುಚ್ಚರಿಸಿದ್ದಾರೆ.
ಮುಂದುವರೆದು, ಮೀಸಲಾತಿ ಹೋರಾಟ ಕುರಿತು, 'ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗಿಲಿ ಎಂದು ಹೋರಾಟ ಮಾಡುತ್ತಿದ್ದಾರೆ. ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯ ಮಾಡುತ್ತೇವೆ ಎಂದು ಹೇಳುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಜತೆಗೆ, ದಾವಣಗೆರೆಯಲ್ಲಿ ಡಿಸೆಂಬರ್ 23, 24 ಕ್ಕೆ ಸಮಾವೇಶ ನಡೆಯಲಿದ್ದು, 2 ಲಕ್ಷ ಜನ ಸೇರುತ್ತಾರೆ. ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಒಮ್ಮತ ಪಡೆಯಲು ಪೂರ್ವಭಾವಿ ಸಭೆ ನಡೆದಿದೆ. ಪ್ರಮುಖರು ಸಭೆ ನಡೆಸಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅವರಿಗೆ ಬಿಟ್ಟಿದ್ದು. ಮೊನ್ನೆ ನಾವು ಗೆದ್ದವು ಎಂಬ ಹುಮ್ಮಸ್ಸು ಇದೆ. ಅದಕ್ಕೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನನ್ನ ಸೊಸೆ ಸ್ಪರ್ಧೆ ಬಗ್ಗೆ ಅವರ ಯಜಮಾನರು ಹೇಳುತ್ತಾರೆ. ಇನ್ನು ಮನೆಯಲ್ಲಿ ಟಿಕೆಟ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಹಳೆಯ ವರದಿ, ಹೊಸ ಜನಗಣತಿ ಸಮೀಕ್ಷೆಯಾಗಬೇಕಿದೆ: ಶಾಮನೂರು ಶಿವಶಂಕರಪ್ಪ ಕೇಂದ್ರ ಸರ್ಕಾರ ಬರದ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ - ಈಶ್ವರ್ ಖಂಡ್ರೆ:ದಾವಣಗೆರೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆ ಪೂರ್ವ ಭಾವಿ ಸಭೆಗೆ ಬಂದಿದ್ದೇನೆ. ಲೋಕಸಭಾ ಆಕಾಂಕ್ಷಿಗಳ ಎಲ್ಲ ಅಧ್ಯಕ್ಷರ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಲೋಕಸಭೆ ಚುನಾವಣೆಯ ತಯಾರಿ ಸಿದ್ಧತೆ ಮಾಡುತ್ತಿದ್ದೇವೆ. ಬಿಜೆಪಿ ಈ ಸಾರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಧೂಳಿಪಟವಾಗುತ್ತದೆ ಎಂದು ಟೀಕಿಸಿದರು.
ಅಲ್ಲದೇ, ರಾಜ್ಯ ಈಗ ಬರದಿಂದ ತತ್ತರಿಸಿ ಹೋಗಿದೆ, ರೈತರು ಕಷ್ಟದಲ್ಲಿದ್ದಾರೆ. ಮುಂಗಾರು - ಹಿಂಗಾರು ಬೆಳೆಗಳು ಕೈಕೊಟ್ಟಿವೆ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬರದ ಬಗ್ಗೆ ಪ್ರಸ್ತಾವನೆ ಮಾಡಿದರೂ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಇನ್ನು ಬಿಜೆಪಿಯ ಸಂಸದರು ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ. ರಾಜ್ಯ ಬಿಜೆಪಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ.
ರಾಜ್ಯದ ಬಗ್ಗೆ ಅನುಕರಣೆ ಇದ್ದರೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದ ಈಶ್ವರ್ ಖಂಡ್ರೆ ನಮ್ಮ ಕಂದಾಯ ಹಾಗೂ ಕೃಷಿ ಸಚಿವರು ಕೇಂದ್ರದ ಸಚಿವರನ್ನು ಭೇಟಿಯಾಗಲು ಹೋದರು. ಆದರೆ, ಭೇಟಿಗೆ ಅವಕಾಶ ಕೊಟ್ಟಿಲ್ಲ. ಇದು ರೈತ ವಿರೋಧಿ ನೀತಿ ತೋರಿಸಿಕೊಡುತ್ತದೆ ಎನ್ನುತ್ತಾ ಜಾತಿ ಗಣತಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದನ್ನೂ ಓದಿ:ಸಿ ಎಸ್ ಷಡಕ್ಷರಿ ವರ್ಗಾವಣೆಗೆ ಶಿವಮೊಗ್ಗ ನೊಳಂಬ ಸಮಾಜದಿಂದ ಖಂಡನೆ