ದಾವಣಗೆರೆ :ರಾಜಕೀಯ ಬಿಟ್ಟು ಸರ್ಕಾರ ನಮಗೆ ಸಿಗುವ ಹಕ್ಕನ್ನು ಮಾನ್ಯ ಮಾಡ್ಬೇಕು. ರಾಜ್ಯ ಸರ್ಕಾರ ಸಕಲ ವೀರಶೈವ ಲಿಂಗಾಯತರನ್ನ ಕೇಂದ್ರದ ಒಬಿಸಿ ಪಟ್ಟಿ ಸೇರ್ಪಡೆಗೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಸ್ವೀಕರಿಸಬೇಕು ಎಂದು ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಹರಜಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ರಾಜ್ಯ ಸರ್ಕಾರಗಳು ನಮ್ಮ ಸಮಯಕ್ಕೆ ಸಹಕಾರಿಯಾಗಬೇಕು. ಬಡವರಿಗೆ ಆಸರೆ ಆಗಬೇಕು. ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ನಾವು ಎಲ್ಲರೂ ಒಂದೇ. ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಎಲ್ಲ ವೀರಶೈವ ಲಿಂಗಾಯತರು ಒಂದೇ ಎಂಬುದನ್ನ ತಿಳಿಯಬೇಕು. ಇಂತಹ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಉದ್ಯೋಗಕ್ಕೆ ಅನುಕೂಲ ಆಗುವ ದೃಷ್ಠಿಯಿಂದ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು, ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಶಿಪಾರಸು ಮಾಡುವಂತೆ ಆಗ್ರಹಿಸಿದರು.
ಇತ್ತೀಚಿಗೆ ಪಂಚಮಸಾಲಿ ಸಮಾಜ ಹೆಚ್ಚು ಬೆಳವಣಿಗೆ ಹೊಂದುತ್ತಿದೆ. ಇದು ಸಂತಸದ ವಿಚಾರ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಹೇಳಿದಂತೆ ಆರು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಮಹಿಳೆಯರಿಗೆ, ವಿದ್ಯಾರ್ಥಿಗಳ ಖಾತೆಗೆ ಹಣ ಬರುತ್ತಿದೆ. ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಗ್ಯಾರಂಟಿಗಳು ಮಹಿಳೆಯರಿಗೆ ಅನುಕೂಲ ಆಗ್ತಿದೆ ಎಂದು ತಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಂತಸ ಹಂಚಿಕೊಂಡರು.