ಕರ್ನಾಟಕ

karnataka

ETV Bharat / state

ದಾವಣಗೆರೆ: ತಂದೆಯ ಕುತಂತ್ರದಿಂದ ಬೇರ್ಪಟ್ಟ ಮಗು; ಕೋರ್ಟ್‌ ಮಧ್ಯಪ್ರವೇಶದಿಂದ ಕೊನೆಗೂ ಅಮ್ಮನ ಮಡಿಲು ಸೇರಿತು! - ಬೇರ್ಪಟ್ಟ ಮಗು

ದಾವಣಗೆರೆಯಲ್ಲಿ ತಂದೆಯೊಬ್ಬ ತನ್ನ ಮಗುವನ್ನು ತಾಯಿಯಿಂದ ಬೇರ್ಪಡಿಸಿ ಉತ್ತರಪ್ರದೇಶಕ್ಕೆ ಕರೆದೊಯ್ದಿದ್ದು, ಇದೀಗ ಕೋರ್ಟ್​ ಆದೇಶದಿಂದ ಮಗು ತಾಯಿಯ ಮಡಿಲು ಸೇರಿದೆ.

ದಾವಣಗೆರೆ ಹರಿಹರ ನ್ಯಾಯಾಲಯ
ದಾವಣಗೆರೆ ಹರಿಹರ ನ್ಯಾಯಾಲಯ

By

Published : Jul 20, 2023, 11:41 AM IST

ಪ್ರಕರಣ ಕುರಿತ ಹೇಳಿಕಗಳು

ದಾವಣಗೆರೆ:ಸ್ವಂತ ತಂದೆಯೇ 16 ತಿಂಗಳ ಮಗುವನ್ನು ತಾಯಿಯಿಂದ ದೂರ ಮಾಡಿ ಉತ್ತರ ಪ್ರದೇಶಕ್ಕೆ ಕೊಂಡೊಯ್ದ ಘಟನೆ ದಾವಣಗೆರೆಯ ಹರಿಹರ ನಗರದಲ್ಲಿ ನಡೆದಿದೆ. ಕರುಳಬಳ್ಳಿಯಿಲ್ಲದೆ ಸಾಕಷ್ಟು ನೋವು ಅನುಭವಿಸಿದ್ದ ತಾಯಿಗೆ ಹರಿಹರದ ನ್ಯಾಯಾಲಯ ಆಸರೆಯಾಗಿದ್ದು, ಉತ್ತರಪ್ರದೇಶದಲ್ಲಿದ್ದ ಮಗುವನ್ನು ತನ್ನ ಮಡಿಲಿಗೆ ಸೇರುವಂತೆ ಮಾಡಿದೆ.

ಪ್ರಕರಣದ ವಿವರ: ಹರಿಹರ ನಗರದಲ್ಲಿ ವಾಸವಾಗಿದ್ದ ನೂರ್ ಜಹಾನ್ ಎಂಬಾಕೆ ವೃತ್ತಿಯಲ್ಲಿ ಶಿಕ್ಷಕಿ. ತಮ್ಮ ಮನೆ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶ ಮೂಲದ ಹಸೀಬ್ ಎಂಬ ವ್ಯಕ್ತಿಯನ್ನು ಈಕೆ ಮದುವೆಯಾಗಿ ಹರಿಹರದಲ್ಲಿ ತನ್ನ ತಂದೆ ಮನೆಯಲ್ಲಿ ವಾಸವಾಗಿದ್ದಳು. ಹಸೀಬ್ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಜೀವನ ಸುಗಮವಾಗಿ ಸಾಗಿತ್ತು. ಆದರೆ 2023 ಜನವರಿ 27ರ ಶುಕ್ರವಾರದಂದು ನಮಾಜ್ ಮುಗಿಸಿ ಮನೆಗೆ ಬಂದ ನೂರ್ ಜಹಾನ್ ಅವರ ತಂದೆಗೆ ಮನೆಯಲ್ಲಿ ಮಗು ಇಲ್ಲದಿರುವುದು ಗಮನಕ್ಕೆ ಬಂದಿದೆ.

ತಕ್ಷಣ ತಮ್ಮ ಮಗಳು ನೂರ್​ ಜಹಾನ್​ಗೆ ತಂದೆ ವಿಷಯ ತಿಳಿಸಿದ್ದಾರೆ. ನೂರ್‌ ಜಹಾನ್ ಅವರು ಪತಿ ಹಸೀಬ್​ಗೆ ದೂರವಾಣಿ ಕರೆ ಮಾಡಿ ಮಗು ಎಲ್ಲಿ? ಎಂದು ಕೇಳಿದರೆ ಇಲ್ಲೇ ಹೇರ್​ ಕಟಿಂಗ್ ಮಾಡಿಸಲು ಕರೆದುಕೊಂಡು ಬಂದಿದ್ದೇನೆ ಎಂದಿದ್ದಾನೆ. ಸಂಶಯಗೊಂಡ ನೂರ್ ಜಹಾನ್ ಮತ್ತು ಆಕೆಯ ತಂದೆ ಹರಿಹರ ನಗರದ ಕಟಿಂಗ್ ಶಾಪಗಳಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ. ಸಂಶಯಗೊಂಡ ನೂರ್ ಜಹಾನ್ ಹರಿಹರ ಪೊಲೀಸ್ ಠಾಣೆಗೆ ತೆರಳಿ ವಿಚಾರ ತಿಳಿಸಿದ್ದಾರೆ. ಪೊಲೀಸರು ನೂರ್ ಜಹಾನ್ ಕಡೆಯಿಂದ ಪತಿಗೆ ಪೋನ್ ಮಾಡಲು ಹೇಳಿ ಟ್ರ್ಯಾಪ್ ಮಾಡಿದಾಗ, ಮಗುವಿನ ಜೊತೆ ಆತ ಉತ್ತರ ಪ್ರದೇಶಕ್ಕೆ ಹೋಗುತ್ತಿರುವುದು ಗೊತ್ತಾಗಿದೆ.

ಆದರೆ ಪೊಲೀಸರು, ತಂದೆಯೇ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದರಿಂದ ಕೇಸ್ ದಾಖಲಿಸಲು ಬರುವುದಿಲ್ಲ. ನೀವು ಕೋರ್ಟ್​ಗೆ ಹೋಗಿ ಎಂದು ಸಲಹೆ ನೀಡಿದ್ದಾರೆ. ಇತ್ತ ಹಸೀಬ್ ತಾನು ಎರಡ್ಮೂರು ದಿನ ಬಿಟ್ಟು ಬರುತ್ತೇನೆ ಅಂತ ಹೇಳಿ ಕಾಲ ದೂಡುತ್ತಿದ್ದರಿಂದ ನೂರ್ ಜಹಾನ್ ಆತಂಕದಲ್ಲೇ ಕಾಲ ಕಳೆಯುತ್ತಿದ್ದರು. ಕೊನೆಗೆ ಕೋರ್ಟ್ ಮೊರೆ ಹೋದಾಗ ತಂದೆಯನ್ನು ಕರೆಸುವ ಉದ್ದೇಶವನ್ನು ಕೋರ್ಟ್ ಮೊದಲಿಗೆ ಹೊಂದಿತ್ತು. ಆದರೆ ಇತ್ತ ಮಗುವಿಗೆ ಎದೆ ಹಾಲುಣಿಸದೆ ಎದೆಯಲ್ಲಿ ಹಾಲು ಹೆಚ್ಚಾಗಿ ನೂರ್ ಜಹಾನ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಮಗುವಿನ ನೆನಪಲ್ಲಿ ಮಾನಸಿಕವಾಗಿ ನೊಂದು ಕೆಲಸವನ್ನು ಬಿಟ್ಟಿದ್ದಳು. ಇದೇ ವೇಳೆ ಮಗು ಬೇಕಿದ್ದರೆ ವಿಚ್ಛೇದನ ಕೊಟ್ಟು ತೆಗೆದುಕೊಂಡು ಹೋಗು ಅಂತ ಪತಿ ಹೇಳಿದ್ದನು.

ಹಾಗಾಗಿ ಇದು 'ವಿಶೇಷ ಪ್ರಕರಣ' ಎಂದು ಕೋರ್ಟ್​ಗೆ ವಕೀಲರಾದ ಇನಾಯತ್ ಹಾಗು ಸಿದ್ದಲಿಂಗ ಸ್ವಾಮಿ ಮನವರಿಕೆ ಮಾಡಿಕೊಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹರಿಹರದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಲಯದ ನ್ಯಾಯಾಧೀಶ ಜ್ಯೋತಿ ಅಶೋಕ್​ ಪತಾರ್​ ತೀರ್ಪು ನೀಡಿ, ಪೊಲೀಸ್ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸೂಚನೆ ನೀಡಿದ್ದರು. ತಕ್ಷಣ ಹರಿಹರ ಪೊಲೀಸರು, ಉತ್ತರ ಪ್ರದೇಶದ ಕಾಕೋರಿ ಎಂಬ ಪಟ್ಟಣಕ್ಕೆ ತೆರಳಿ ಅಲ್ಲಿನ ಪೊಲೀಸರೊಂದಿಗೆ ಚರ್ಚಿಸಿ ನ್ಯಾಯಾಲಯ ಆದೇಶಿಸಿರುವ ವಿಚಾರ ತಿಳಿಸಿ ಪೊಲೀಸರ ಸಹಾಯದೊಂದಿಗೆ ಮಗುವನ್ನು ತಾಯಿಯ ಮಡಿಲಿಗೆ ಸೇರುವಂತೆ ಮಾಡಿದ್ದಾರೆ.

ಸಿಹಿ ಹಂಚಿದ ನೂರ್ ಜಹಾನ್: ಐದಾರು ತಿಂಗಳುಗಳ ಕಾಲ ತಾಯಿ ನೂರ್ ಜಹಾನ್​ಳಿಂದ ದೂರವಿದ್ದ 16 ತಿಂಗಳ ಮಗು ತಾಯಿಯ ಮಡಿಲು ಸೇರಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಮಗು ಸಿಕ್ಕ ಸಂತೋಷಕ್ಕೆ ನೂರ್ ಜಹಾನ್ ಹರಿಹರದಲ್ಲಿನ ತನ್ನ ಮನೆಯ ಅಕ್ಕಪಕ್ಕದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ರೈಲಿನಿಂದ ಇಳಿಯುವಾಗ ಅಚಾನಕ್ ಮೋರಿಗೆ ಬಿದ್ದ 4 ತಿಂಗಳ ಹಸುಗೂಸು; ಕರುಳುಹಿಂಡುವ ತಾಯಿಯ ಆಕ್ರಂದನ

ABOUT THE AUTHOR

...view details