ಮುಂದುವರೆದ ಕಾರ್ಯಾಚರಣೆ; ಸಕ್ರೆಬೈಲ್ ಬಿಡಾರದ ವೈದ್ಯರ ಮೇಲೆ ಒಂಟಿ ಸಲಗ ದಾಳಿ ದಾವಣಗೆರೆ/ಶಿವಮೊಗ್ಗ:ಪುಂಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ನ ಬಿಡಾರದ ಹಿರಿಯ ವೈದ್ಯ ಡಾ.ವಿನಯ್ ಮೇಲೆ ಒಂಟಿಸಲಗ ದಾಳಿ ಮಾಡಿದೆ. ತಕ್ಷಣವೇ ವೈದ್ಯ ವಿನಯ್ ಅವರನ್ನು ಶಿವಮೊಗ್ಗದ ಖಾಸಗಿ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ದಾವಣಗೆರೆಯಲ್ಲಿ ಮೊನ್ನೆ ಯುವತಿಯನ್ನು ಕೊಂದು ಮೂವರ ಮೇಲೆ ದಾಳಿ ನಡೆಸಿದ್ದ ಅದೇ ಕಾಡಾನೆ ಸಕ್ರೆಬೈಲು ಆನೆ ಬಿಡಾರದ ವೈದ್ಯಾಧಿಕಾರಿ ಡಾ.ವಿನಯ್ ಅವರ ಮೇಲೂ ದಾಳಿ ನಡೆಸಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಜಿನಹಳ್ಳಿ ಬಳಿ ಇಂದು ಬೆಳಗ್ಗೆ ಡಾ.ವಿನಯ ಕಾಡಾನೆಗೆ ಡಾಟ್ ಮಾಡಿದ್ದಾರೆ. ಕಾಡಾನೆ ನೆಲಕ್ಕುರುಳಿದ ಬಳಿಕ ಕಾಡಾನೆ ಬಳಿಗೆ ಹೋಗಿದ್ದಾರೆ. ಸಾಮಾನ್ಯವಾಗಿ ಡಾಟ್ ಮಾಡಿದ ತಕ್ಷಣ ಪ್ರಜ್ಞೆ ತಪ್ಪಿ ಬೀಳುತ್ತದೆ. ಮತ್ತೆ ಪ್ರಜ್ಞೆ ಬಂದು ಮೇಲೇಳಲು ಸುಮಾರು 40 ನಿಮಿಷ ಬೇಕು.
ಆದರೆ, ಕಾಡಾನೆ ಏಕಾಏಕಿ ಮೇಲೆದ್ದು ಡಾ.ವಿನಯ್ ಬೆನ್ನಿನ ಮೇಲೆ ಕಾಲಿಟ್ಟಿದೆ. ಅಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಏರ್ ಫೈರ್ ಮಾಡಿದರು. ಇದರಿಂದ ಅಲ್ಲಿಂದ ಅಡ್ಡಾದಿಡ್ಡಿಯಾಗಿ ಓಡಿದ್ದು ಕೊನೆಗೂ ಎಲ್ಲರ ಸಹಕಾರ, ಹರಸಾಹಸದಿಂದ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ.
ಆನೆ ಓಡುವ ಭರದಲ್ಲಿ ವೈದ್ಯರ ಮೇಲೆ ಕಾಡಾನೆ ತುಳಿಯದೆ, ಕೇವಲ ಬೆನ್ನ ಮೇಲೆ ಕಾಲಿಟ್ಟಿದೆ. ಇದರಿಂದಾಗಿ ಅವರ ಬಲಗೈ ಮೂಳೆ, ಪಕ್ಕೆಲುಬು ಮುರಿದಿದೆ. ಶ್ವಾಸಕೋಶದೊಳಗೆ ರಕ್ತಸ್ತ್ರಾವವಾಗಿದೆ. ತಕ್ಷಣ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಂಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆ ಕಾರ್ಯಚರಣೆ ಕುರಿತು ವಿವರಿಸುತ್ತಿರುವ ಗ್ರಾಮಸ್ಥರು ಆನೆ ದಾಳಿಯಿಂದ ಮೃತಪಟ್ಟಿದ್ದ ಬಾಲಕಿ:ದಾವಣಗೆರೆಯ ಚನ್ನಗಿರಿ ತಾಲೂಕಿನ ಸೇವಾನಗರ, ಸೋಮಲಾಪುರ, ಕಾಶಿಪುರ ಮತ್ತು ಜಕಲಿ ಗ್ರಾಮಗಳಲ್ಲಿ ಕಾಡಾನೆ ದಾಳಿ ಮುಂದುವರೆಯುತ್ತಲೇ ಇತ್ತು. ಶನಿವಾರ ಬಾಲಕಿ ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಳು. ಘಟನೆಯ ನಂತರ ಗ್ರಾಮಸ್ಥರು ಕಾಡಾನೆ ಸೆರೆ ಹಿಡಿಯಬೇಕಾಗಿ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಹೀಗಾಗಿ ಸಾಕಾನೆಗಳಾದ ಬಾಲಯ್ಯ, ಸಾಗರ್, ಬಹದ್ದೂರ್ ಎಂಬ ಮೂರು ಆನೆಗಳನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಕರೆತಂದಿದ್ದರು. ಇವುಗಳ ಮೂಲಕ ಕಾಡಾನೆಯ ಕಾರ್ಯಾಚರಣೆಯನ್ನು ಮೊನ್ನೆಯಿಂದ ನಡೆಸುತ್ತಿದ್ದರು.
ಇದನ್ನೂ ಓದಿ:ದಾವಣಗೆರೆ: ಕಾಡಾನೆ ಸೆರೆಗೆ ಸಕ್ಕರೆಬೈಲು ಆನೆಗಳಿಂದ ಕಾರ್ಯಾಚರಣೆ