ಹರಿಹರ: ಎಲ್ಲಾ ಧರ್ಮೀಯರ ಶ್ರದ್ಧಾ ಕೇಂದ್ರಗಳು ಸಂಸ್ಕಾರ ಬೆಳೆಸುವ ಮೂಲವಾಗಿವೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಬಜಾರ್ ಮೊಹಲ್ಲಾದ ಖದೀಮ್ ಮಸೀದಿಯಲ್ಲಿ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯ ಪ್ರಗತಿಯಲ್ಲಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಮಂದಿರ, ಮಸೀದಿ, ಚರ್ಚ್, ಗುರುದ್ವಾರದಂತಹ ಶ್ರದ್ಧಾ ಕೇಂದ್ರಗಳು ಮನುಷ್ಯನಲ್ಲಿ ಮನುಷ್ಯತ್ವ ತುಂಬುತ್ತಿವೆ. ಶಾಲೆ, ಕಾಲೇಜು, ಮನೆಯಲ್ಲಿ ಸಿಗದಂತಹ ಮೌಲ್ಯಗಳನ್ನು ಶ್ರದ್ಧಾ ಕೇಂದ್ರಗಳಲ್ಲಿ ಕಲಿಸಲಾಗುತ್ತದೆ. ವಿದ್ಯಾವಂತ, ಅವಿದ್ಯಾವಂತ, ಬಡವ, ಬಲ್ಲಿದ, ಮಕ್ಕಳು, ಪುರುಷ, ಮಹಿಳೆ ಎನ್ನದೇ ಎಲ್ಲರಲ್ಲೂ ಸಂಸ್ಕಾರ ಮೂಡಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿವೆ ಎಂದರು.
ಈ ಮಸೀದಿಯಲ್ಲಿ ಪ್ರಾರ್ಥನೆಗೆ ಮುನ್ನ ನೆರವೇರಿಸುವ ವಜೂ ಖಾನಾ (ಮುಖ, ಕೈ, ಕಾಲು ತೊಳೆಯುವ ಸ್ಥಳ) ನಿರ್ಮಾಣಕ್ಕಾಗಿ ಆಡಳಿತ ಮಂಡಳಿಯವರು ಬಹು ಹಿಂದೆಯೇ ಬೇಡಿಕೆ ಇಟ್ಟಿದ್ದರು. ಆ ಕಾಮಗಾರಿಗಾಗಿ ನನ್ನ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ನಜೀರ್ ಹುಸೇನ್, ರಹಮಾನ್, ಸ್ವಾಲೇಹ, ಮಸೀದಿ ಸಮಿತಿ ಅಧ್ಯಕ್ಷ ಶೇಖ್‌ಜಹೀರುದ್ದೀನ್, ಕಾರ್ಯದರ್ಶಿ ಅಬ್ದುಲ್‌ರಹಮಾನ್ ಪತ್ತಾರಿ, ಇರ್ಷಾದ್‌ಅಹ್ಮದ್‌ಖಾದ್ರಿ, ಅಬ್ದುಲ್ ಬಾರಿ, ಪಿ. ಜಿಯಾಉಲ್ಲಾ, ಅಬ್ದುಲ್‌ರಹಮಾನ್ ಪಂಜಾಬಿ, ಕುಲುಮಿ ಬಾಬುಸಾಬ್ ಇತರರಿದ್ದರು.