ದಾವಣಗೆರೆ:ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಸುರಿದರೂ ಜಿಲ್ಲೆಯ ವಿವಿಧ ಭಾಗಗಳ ರಸ್ತೆಗಳು ಮಳೆಗಾಲ ಕಳೆಯುತ್ತಿದ್ದಂತೆ ಅಧ್ವಾನಗೊಂಡಿರುತ್ತವೆ. ರಸ್ತೆಗಳು ಅಭಿವೃದ್ಧಿಗೊಂಡು ದಶಕ ಕಳೆದಿರಬಹುದು ಎನ್ನುವಷ್ಟರ ಮಟ್ಟಿಗೆ ತಲುಪಿರುತ್ತವೆ. ಕಳಪೆ ಕಾಮಗಾರಿಯೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ. ಆದರೆ, ಅದಕ್ಕೆಂದು ಮುಕ್ತಿ ಅನ್ನೋದೇ ಯಕ್ಷಪ್ರಶ್ನೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಒಳಚರಂಡಿ ಕೆಲಸಗಳು ನಡೆಯುತ್ತಿವೆಯಾದರೂ ವೇಗ ಪಡೆದಿಲ್ಲ. ಎಲ್ಲಾ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಹಳೆ ದಾವಣಗೆರೆ ಭಾಗದಲ್ಲಿ ವರ್ಷಧಾರೆ ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳುತ್ತಾರೆ. ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಳೆಗಾಲದವರೆಗೂ ಕೊಂಡೊಯ್ಯುತ್ತದೆ. ಗುಣಮುಟ್ಟದ ಕೆಲಸ ಆಗದಿರುವುದು, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಈ ವಿಚಾರದಲ್ಲಿ ಇಚ್ಛಾಶಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ. ಒಂದು ವೇಳೆ ಗುಣಮಟ್ಟದಿಂದ ನಡೆಸಿದರೆ ಈ ಸಮಸ್ಯೆ ಎದುರಾಗುವ ಸಂಭವವೇ ಬರುವುದಿಲ್ಲ. ಇದು ಪ್ರತಿವರ್ಷ ಉಲ್ಬಣಿಸುವ ಸಮಸ್ಯೆ ಎಂದು ಜನರು ದೂರುತ್ತಾರೆ.
ರಸ್ತೆಗಳ ಅಭಿವೃದ್ಧಿ ಕುರಿತು ಅಭಿಪ್ರಾಯ ರಾಜಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಅಲ್ಲದೆ, ಮನೆಗಳಿಗೂ ನುಗ್ಗುತ್ತದೆ. ರಸ್ತೆಗಳು ಕಿತ್ತುಹೋಗುವುದಲ್ಲದೆ, ಬಡಾವಣೆಗಳ ನಿವಾಸಿಗಳ ಬದುಕು ಸಹ ದುಸ್ತರವಾಗುತ್ತದೆ. ಸದ್ಯ ಪಾಲಿಕೆ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದು, ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಕಳಪೆ ಗುಣಮುಟ್ಟ ಕಾಮಗಾರಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳು ಗುತ್ತಿಗೆದಾರರಿಗೆ ಎಚ್ಚರಿಸಿದ್ದಾರೆ.
ಸಿಗದ ಕುಡಿಯುವ ನೀರಿಗೆ ಪರಿಹಾರ:ವಾರದಲ್ಲಿ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆಲವೊಮ್ಮೆ 15 ದಿನಗಳೂ ಆಗುತ್ತದೆ. ಹರಿಹರ ತಾಲೂಕಿನ ರಾಜನ ಹಳ್ಳಿಯಲ್ಲಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಕೆಲಸ ಮುಗಿಯುವ ಹಂತಕ್ಕೆ ಬಂದಿದ್ದರೂ, ನೀರು ಪೂರೈಸಲು ಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ. ಜಲಸಿರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಡಿ ₹1,500 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.