ದಾವಣಗೆರೆ:ಒಂದು ರಥ ಅಂದರೆ ಅದನ್ನು ನೂರಾರು ಜನರು ಎಳೆದ ಬಳಿಕವೇ ಮುಂದೆ ಸಾಗಬೇಕು. ಆದರೆ ಇಲ್ಲಿರುವ ರಥ ವಿಭಿನ್ನ. ಇದು ಭಕ್ತರಿಂದ ಎಳೆಯಲ್ಪಡುವ ಬದಲು ತಾನೇ ಮುಂದಕ್ಕೆ ಚಲಿಸುತ್ತದೆ. ವಾಲ್ಮೀಕಿ ಗುರುಪೀಠದ ಬೃಹತ್ ನೂತನ ತೇರು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ವಾಲ್ಮೀಕಿ ಮಠದ ಆವರಣದಲ್ಲಿ ಕೋಟ್ಯಂತರ ರೂ ವ್ಯಯಿಸಿ ನಿರ್ಮಿಸಲಾದ ವಿದ್ಯುತ್ ರಿಮೋಟ್ ಕಟ್ರೋಲ್ನಿಂದ ಚಲಿಸುವ ಭವ್ಯ ತೇರನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.
ವಿವರ: ರಾಜ್ಯಾದ್ಯಂತ ಜರುಗುವ ಜಾತ್ರೆಗಳಲ್ಲಿ ಎಳೆಯಲ್ಪಡುವ ತೇರುಗಳನ್ನು ಅಲ್ಲಿನ ಭಕ್ತರು ಸಾಮಾನ್ಯವಾಗಿ ಎಳೆಯುವುದನ್ನು ಕಂಡಿದ್ದೇವೆ. ಆದರೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ಸಿದ್ಧವಾದ ರಥ ಮಾತ್ರ ಸ್ವಲ್ಪ ವಿಶೇಷವಾಗಿದೆ. ಈ ರಥ ತನ್ನ ಪಾಡಿಗೆ ತಾನು ಚಲಿಸುವ ಸಾಮರ್ಥ್ಯ ಹೊಂದಿದೆ. ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿನ ಎರಡು ದಿನಗಳ ಜಾತ್ರಾ ಮಹೋತ್ಸವ ಭಕ್ತರಲ್ಲಿ ಸಂಭ್ರಮ ಸಡಗರ ಮನೆ ಉಂಟು ಮಾಡಿತ್ತು. ಇದೇ ವೇಳೆ ಜಾತ್ರೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ ರಥ ಭಕ್ತರನ್ನು ಕಣ್ಣರಳಿಸಿ ನೋಡುವಂತೆ ಮಾಡಿತು.
ರಥ ನಿರ್ಮಾಣ ಮಾಡಲು 2 ಕೋಟಿ 15 ಲಕ್ಷ ರೂ ಖರ್ಚಾಗಿದೆ. ರಿಮೋಟ್ ಕಟ್ರೋಲ್ ರಥಕ್ಕೆ ಮಠದ ಆವರಣದಲ್ಲಿ ಪ್ರಸನ್ನಾನಂದ ಪುರಿ ಶ್ರೀ ಚಾಲನೆ ನೀಡಿದರು. ನಿರ್ಮಾಣಕ್ಕೆ ಬೇಕಿದ್ದ ಒಟ್ಟು 2.15 ಕೋಟಿ ಪೈಕಿ ಒಂದೂವರೆ ಕೋಟಿ ಹಣವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನೀಡಿದ್ದಾರೆ. ಇನ್ನುಳಿದ ಹಣವನ್ನು ಮಠದಿಂದಲೇ ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ.