ದಾವಣಗೆರೆ :ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೈ ಕಮಲ ಕಲಿಗಳು ಅದ್ಧೂರಿ ಪ್ರಚಾರ ಮಾಡ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮತ ಶಿಕಾರಿಗಾಗಿ ಫೀಲ್ಡ್ಗೆ ಇಳಿದಿರುವ ಅಭ್ಯರ್ಥಿಗಳು ಕಾರ್ಯಕರ್ತರ ದಂಡುಕಟ್ಟಿಕೊಂಡು ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತ ಬೇಟೆಗಿಳಿದಿದ್ದಾರೆ. ಅಲ್ಲದೆ ಟಿಕೆಟ್ ಘೋಷಣೆಯಾಗಿ ನಾಮಪತ್ರ ಸಲ್ಲಿಸಿದ್ರು ಕೂಡ ಜಗಳೂರು ಕಾಂಗ್ರೆಸ್ನಲ್ಲಿ ಬಂಡಾಯದ ಹೊಗೆ ಆರುವಂತೆ ಕಾಣ್ತಿಲ್ಲ. ಮಾಜಿ ಶಾಸಕ ಹೆಚ್ ಪಿ ರಾಜೇಶ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕೈ ಅಭ್ಯರ್ಥಿಗೆ ತಲೆ ಬಿಸಿಯಾಗಿ ಪರಿಣಮಿಸಿದೆ.
ದಾವಣಗೆರೆ ಕಾಂಗ್ರೆಸ್ನ ಭದ್ರ ಕೋಟೆಯಾಗಿತ್ತು. 2018 ರಲ್ಲಿ ಬಿಜೆಪಿ ಕಾಂಗ್ರೆಸ್ ಭದ್ರಾಕೋಟೆಯನ್ನು ಭೇದಿಸಿ 07 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಿತ್ತು. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ಮುಂದಾಗಿದ್ದು, ಹೊಸಮುಖಗಳನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಿಕೆರೆ ನಾಗರಾಜ್ ಅವರಿಗೆ ಟಿಕೆಟ್ ನೀಡಿದ್ದು, ಅವರು ಅಬ್ಬರದ ಪ್ರಚಾರಕ್ಕೆ ಧುಮುಕಿದ್ದಾರೆ. ಸಂಸದ ಜಿ ಎಂ ಸಿದ್ದೇಶ್ವರ್ ಅವರೊಂದಿಗೆ ಇಂದು ದಾವಣಗೆರೆ ನಗರದ ವಿನೋಬ ನಗರ ಹಾಗೂ ಯಲ್ಲಮ್ಮ ನಗರದಲ್ಲಿ ಬೃಹತ್ ರೋಡ್ ಶೋ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶಿಸಿದರು. ಈ ಮೂಲಕ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳ ಮೇಲೆ ಮತಯಾಚಿಸಿದ್ರು. ಇದಲ್ಲದೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಜೆ ಅಜಯ್ ಕುಮಾರ್ ಅವರು ಕೂಡ ಸಾಕಷ್ಟು ಪ್ರಚಾರದಲ್ಲಿ ತೊಡಗಿಸಿಕೊಂಡು ಮತ ಶಿಖಾರಿ ಮಾಡ್ತಿದ್ದಾರೆ.