ದಾವಣಗೆರೆ: ಕೊರೊನಾ ಸೋಂಕಿಗೆ ಹೊನ್ನಾಳಿ ತಾಲೂಕಿನ ರಾಂಪುರದ ಬೃಹನ್ಮಠದ ವಿಶ್ವೇಶ್ವರ ಹಾಲ ಸ್ವಾಮೀಜಿಯವರು ವಿಧಿವಶರಾಗಿದ್ದು, ಲಕ್ಷಾಂತರ ಮಂದಿ ಭಕ್ತಗಣವನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೋಗಿದ್ದಾರೆ.
ಬೃಹನ್ಮಠದ ಆವರಣದಲ್ಲಿಯೇ ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನಿನ್ನೆ ರಾತ್ರಿ ನೆರವೇರಿಸಲಾಗಿದೆ. ಕೊರೊನಾದಿಂದ ಸಾವನ್ನಪ್ಪಿದ ಕಾರಣ ಮೆಗ್ಗಾನ್ ಆಸ್ಪತ್ರೆಯ ಐವರು ಸಿಬ್ಬಂದಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶ್ರೀಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಆದರೆ ಕೊನೆ ಬಾರಿಯಾದರೂ ಶ್ರೀಗಳ ದರ್ಶನ ಪಡೆಯಬೇಕೆಂಬ ಭಕ್ತರ ಆಸೆ ನುಚ್ಚುನೂರಾಗಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳನ್ನು ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿತ್ತು. ಈ ವೇಳೆ ಶ್ರೀಗಳಲ್ಲಿ ಕೋವಿಡ್ ಇರುವುದು ಪತ್ತೆಯಾಗಿತ್ತು. ನಿನ್ನೆ ಹೃದಯಾಘಾತಕ್ಕೆ ಒಳಗಾದ ಶ್ರೀಗಳು ಅಪಾರ ಭಕ್ತ ಗಣವನ್ನು ಅಗಲಿದ್ದಾರೆ. ಜುಲೈ 20ಕ್ಕೆ 56ನೇ ವರ್ಷಕ್ಕೆ ಕಾಲಿಡಲಿದ್ದ ಶ್ರೀಗಳು ತಮ್ಮ ಹುಟ್ಟುಹಬ್ಬಕ್ಕೆ ಐದು ದಿನ ಮುಂಚೆಯೇ ಲಿಂಗೈಕ್ಯರಾಗಿ ಭಕ್ತರ ನೋವು ಹೆಚ್ಚಾಗುವಂತೆ ಮಾಡಿದ್ದಾರೆ.
ಶ್ರೀಗಳು ಬೆಳೆದು ಬಂದ ದಾರಿ
ರಾಂಪುರದ ಹಾಲಸ್ವಾಮಿ ಬೃಹನ್ಮಠದ 5ನೇ ಪಟ್ಟಾಧಿಕಾರ ಗುರುಗಳಾಗಿದ್ದ ಶ್ರೀಗಳು ಪೂರ್ವಾಶ್ರಮದಲ್ಲಿ ವಿಶ್ವಾರಾಧ್ಯ ಹಾಲ ಸ್ವಾಮಿ ಹಾಗೂ ಗಿರಿಜಾಂಬ ದಂಪತಿಯ ಪುತ್ರರಾಗಿದ್ದರು. 1965ರ ಜುಲೈ 20ರಂದು ಜನಿಸಿದ್ದರು. ಮೈಸೂರಿನ ಸೇಂಟ್ ಥಾಮಸ್ ಕಾನ್ವೆಂಟ್ನಲ್ಲಿ ಪ್ರಾಥಮಿಕ ಶಿಕ್ಷಣ, 8 ಮತ್ತು 9ನೇ ತರಗತಿಯನ್ನು ಶಾರದಾ ವಿಲಾಸ ಹೈಸ್ಕೂಲಿನಲ್ಲಿ, ಎಸ್ಎಸ್ಎಲ್ಸಿ ಹೊನ್ನಾಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.
ನಂತರ ಧಾರವಾಡದ ಮುರುಘಾ ಮಠದಲ್ಲಿದ್ದು, ಕರ್ನಾಟಕ ಕಲಾ ಕಾಲೇಜಿನಲ್ಲಿ ಪಿಯುಸಿ ಓದಿ, ಭದ್ರಾವತಿಯ ಸರ್ಎಂವಿ ಕಾಲೇಜಿನಲ್ಲಿ ಬಿಎ ಪೂರೈಸಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಡಿಪ್ಲೋಮಾ ಅಭ್ಯಾಸ ಮಾಡಿದ್ದ ಅವರು, ಶಿವಮೊಗ್ಗದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ವ್ಯಾಸಂಗ ಮಾಡಲು ಸೇರಿದ್ದರು. ಆದರೆ ವ್ಯಾಸಂಗ ಪೂರ್ಣಗೊಳಿಸದೆ ಮಠದ ಉಸ್ತುವಾರಿ ವಹಿಸಿಕೊಂಡರು.
ಸುಮಾರು ನಾಲ್ಕು ವರ್ಷಗಳ ಕಾಲ ಶ್ರೀಮಠದ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀಗಳು, 1996ರ ಜನವರಿ 22ರಂದು ಶ್ರೀಮಠದ ಪಟ್ಟಾಧಿಕಾರವನ್ನು ವಿದ್ಯುಕ್ತವಾಗಿ ಪಡೆದರು. ಅಲ್ಲಿಯವರೆಗೆ ಚನ್ನಬಸವ ಸ್ವಾಮಿಯಾಗಿದ್ದ ಇವರು ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿ ಹೆಸರಿನಲ್ಲಿ ಸನ್ಯಾಸ ದೀಕ್ಷೆ ಪಡೆದರು. 5ನೇ ಪೀಠಾಧಿಪತಿಯಾದ ಶ್ರೀಗಳು, ಶಾಖಾ ಮಠಗಳಾದ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಗವಿಮಠ ಮತ್ತು ಹೊಳಲ್ಕೆರೆ ತಾಲೂಕಿನ ಗುಂಡೇರಿ ಹಾಲ ಸ್ವಾಮಿ ಮಠಗಳ ಅಧಿಕಾರ ಪಡೆದರು.
ಭಕ್ತರ ಪಾಲಿನ ಪ್ರೀತಿಯ 'ಮುಳ್ಳುಗದ್ದುಗೆ' ಸ್ವಾಮೀಜಿ
ಶ್ರೀಗಳು ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಭಕ್ತರ ಸಂಕಷ್ಟ ಆಲಿಸಿ ಆಶೀರ್ವಾದ ನೀಡುತ್ತಿದ್ದರು. ಬಸವಪಟ್ಟಣದ ಗವಿಮಠದಲ್ಲಿ ಕಾರ್ತಿಕ ಶುದ್ಧ ಪಂಚಮಿಯಿಂದ ಬಹುಳದ (21 ದಿನಗಳವರೆಗೆ) ಅನುಷ್ಠಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. 21ನೇ ದಿನದಂದು ಉಚಿತ ದೀಕ್ಷಾ ಹಾಗೂ ಸಾಮೂಹಿಕ ವಿವಾಹ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ಸೀಗೆಹುಣ್ಣಿಮೆಯ ಮಾರನೇ ದಿನ ಶ್ರೀಮಠದ ವಿಶೇಷ ಆಚರಣೆಯಾದ ಮುಳ್ಳುಗದ್ದುಗೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸುತ್ತಿದ್ದರು. ಹೀಗಾಗಿಯೇ ಮುಳ್ಳುಗದ್ದುಗೆ ಶ್ರೀಗಳು ಅಂತಾನೇ ಇವರು ಪ್ರಸಿದ್ಧಿ ಪಡೆದಿದ್ದರು.
ಕೇವಲ ವೀರಶೈವ ಲಿಂಗಾಯತರು ಮಾತ್ರವಲ್ಲ, ಎಲ್ಲಾ ಧರ್ಮದವರು, ಜಾತಿಯವರನ್ನು ಹತ್ತಿರದಿಂದ ನೋಡಿ ಕಷ್ಟಕ್ಕೆ ನೆರವಾಗುತ್ತಿದ್ದರು. ಪಕ್ಕಾ ಸಂಪ್ರದಾಯಸ್ಥ ಮನೆತನದಿಂದ ಬಂದಿದ್ದರೂ ಮೌಢ್ಯತೆ ವಿರುದ್ಧ ಸಮರ ಸಾರಿದ್ದರು. ಒಟ್ಟಿನಲ್ಲಿ ಕೊರೊನಾ ಎಂಬ ಮಹಾಮಾರಿಗೆ ಲಕ್ಷಾಂತರ ಭಕ್ತರ ಆರಾಧ್ಯ ದೈವ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಕೊನೆಯುಸಿರೆಳೆದಿದ್ದು ದುರಂತವೇ ಸರಿ.