ದಾವಣಗೆರೆ : ಜೆಡಿಎಸ್ ಪಕ್ಷದಲ್ಲಿನ ನಡವಳಿಕೆ ಬಗ್ಗೆ ಮಾಜಿ ಶಾಸಕ ಮಧು ಬಂಗಾರಪ್ಪ ಅಸಮಾಧಾನ ಹೊರಹಾಕಿದ ಬೆನ್ನಲ್ಲೆ, ಇನ್ನೊಬ್ಬ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಪಕ್ಷದಿಂದ ಹೊರ ಬಂದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾಲ್ಕು ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತನಾಗಿ, ರಾಜ್ಯ ವಕ್ತಾರನಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ರಾಜಕೀಯ ಗುಣ ಕಳೆದುಕೊಂಡ ಜೆಡಿಎಸ್:
ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿರುವ ಮೊದಲಿಗ ನಾನಲ್ಲ. ಈಗಾಗಲೇ ಹಲವರು ಪಕ್ಷದಿಂದ ಹೊರ ಬಂದಿದ್ದಾರೆ. ಜೆಡಿಎಸ್ ರಾಜಕೀಯ ಗುಣಗಳನ್ನು ಕಳೆದುಕೊಂಡಿದೆ. ಇದು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಆಗುತ್ತಿರುವ ನಷ್ಟ. ನನ್ನ ರಾಜೀನಾಮೆಗೆ ಆಗ್ನೇಯ ಪದವೀಧರರ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ ಎಂಬುದು ಒಂದೇ ಕಾರಣವಲ್ಲ. ಈ ಹಿಂದೆ ಪೂರ್ಣಾವಧಿಗೆ ವಿಧಾನಪರಿಷತ್ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡಲಾಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದ್ದು, ಬೇರೆ ಪಕ್ಷದ ಜೊತೆ ಮಾತುಕತೆ ನಡೆಸುತ್ತೇನೆ. ಟಿಕೆಟ್ ನೀಡಿದರೆ ಪಕ್ಷದಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದರು.