ದಾವಣಗೆರೆ:ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ಆರ್ಟಿಐ ಕಾರ್ಯಕರ್ತ ಹಾಗೂ ಕನ್ನಡಪರ ಹೋರಾಟಗಾರ ರಾಮಕೃಷ್ಣ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ ಪಿಡಿಒ ಎಟಿ ನಾಗರಾಜ್ ಕೋರ್ಟ್ಗೆ ಶರಣಾಗತಿಯಾಗಿದ್ದಾನೆ.
ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣನ ಕೊಲೆಯ ಪ್ರಕರಣದಲ್ಲಿ ಪ್ರಮುಖ ಆರೋಪಿ ಪಿಡಿಒ ಎ.ಟಿ. ನಾಗರಾಜ್ ಕಳೆದ ದಿನ ದಾವಣಗೆರೆ ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕಳೆದ ವಾರ ರಾಮಕೃಷ್ಣ ಅವರನ್ನು ಮಾರಕಾಸ್ತ್ರಗಳಿಂದ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ಭೀಕರವಾಗಿ ಹತ್ಯೆ ಮಾಡಿ ಕೊಲೆ ಮಾಡಲಾಗಿತ್ತು. ಪಿಡಿಒ ನಾಗರಾಜ್ ಕುಮ್ಮಕ್ಕಿನಿಂದ ಕೊಲೆ ನಡೆದಿದೆ ಎಂಬ ಆರೋಪವಿದೆ.
ಇದರ ಸಂಬಂಧ ಅರ್ಜುನ್, ಪ್ರಶಾಂತ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಪಿಡಿಒ ನಾಗರಾಜ್ ಉದ್ಯೋಗ ಖಾತ್ರಿಯಲ್ಲಿ ಎಸಗಿದ್ದ ಅಕ್ರಮವನ್ನು ಬಯಲಿಗೆಳೆದು ನಾಲ್ಕು ಬಾರಿ ಅಮಾನತು ಆಗುವಂತೆ ಹತ್ಯೆಯಾದ ರಾಮಕೃಷ್ಣ ಮಾಡಿದ್ದನು. ಇದರಿಂದ ಈ ಹತ್ಯೆ ಹಿಂದೆ ಎಟಿ ನಾಗರಾಜ್ ಅವರ ಕುಮ್ಮಕ್ಕಿನಿಂದ ಹತ್ಯೆ ಮಾಡಲಾಗಿದೆ, ಅವರನ್ನು ಬಂಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದವು.
ಇದಕ್ಕೆ ಮಣಿದ ಪೋಲಿಸರು ಪ್ರಮುಖ ಆರೋಪಿ(ಎ 1) ಆರೋಪಿ ಪಿಡಿಒ ಎಟಿ ನಾಗರಾಜ್ ಸೇರಿ ಒಟ್ಟು 11 ಜನರ ವಿರುದ್ಧ ಜಗಳೂರು ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಕೊಲೆ ಮೊಕದ್ದಮೆಯಲ್ಲಿ ಪಿಡಿಒ ಎಟಿ ನಾಗರಾಜ್ ಸೇರಿದಂತೆ ಮೂವರು ನ್ಯಾಯಾಂಗ ಬಂಧನದಲ್ಲಿದ್ದು, ಉಳಿದ 8 ಮಂದಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹತ್ಯೆ ನಡೆಸಿದ್ದು ಹೀಗೆ: ಆರೋಪಿಗಳಾದ ಅರ್ಜುನ್, ಪ್ರಶಾಂತ್ ಕೊಲೆಯಾದ ಜಗಳೂರಿನ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರ ರಾಮಕೃಷ್ಣನನ್ನು ಪಾರ್ಟಿ ನೆಪದಲ್ಲಿ ಹೊಸಕೆರೆ ಡಾಬಾಕ್ಕೆ ಕರೆಸಿಕೊಂಡಿದ್ದರು. ಅಲ್ಲಿ ಗೆಳೆಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪ ಗಲಾಟೆಗೆ ತಿರುಗಿದೆ. ಪರಿಣಾಮ ಆರೋಪಿಗಳು ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ರಾಮಕೃಷ್ಣನ್ನು ಡಾಬಾದಲ್ಲಿಯೇ ಹತ್ಯೆ ಮಾಡಿದ್ದರು. ಹಲ್ಲೆ ಮಾಡಲು ಬಳಸಿರುವ ಶಸ್ತ್ರಾಸ್ತ್ರಗಳನ್ನು ನೋಡಿದಾಗ ಇದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಗೆ ಕಾರಣ: ಗ್ರಾಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹತ್ಯೆಗೆ ಒಳಗಾದ ರಾಮಕೃಷ್ಣ ಹೋರಾಟಕ್ಕೆ ಇಳಿದು ಗ್ರಾಮದ ಪಿಡಿಒ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೇ ಕಾರಣದಿಂದಾಗಿಯೇ ಹತ್ಯೆ ಮಾಡಿರಬಹುದು ಎಂಬ ಅನುಮಾನ ಬಲವಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ . ಮತ್ತೊಂದು ಕಡೆ ಈ ಸಂಬಂಧ ಪ್ರತಿಭಟನೆಗಳು ಹಾಗೂ ಒತ್ತಾಯಗಳು ಬಲವಾಗಿ ಕೇಳಿಬಂದಿರುವುದರಿಂದ ಪಿಡಿಒ ಗೆ ಕೋರ್ಟ್ಗೆ ಹಾಜರಾಗಲು ತಿಳಿಸಿದ್ದರು. ಇದೀಗ ಪಿಡಿಓ ಎಟಿ ನಾಗರಾಜ್ ಕೋರ್ಟ್ಗೆ ಹಾಜರಾಗಿದ್ದಾರೆ.
ಇದನ್ನೂ ಓದಿ:ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರ ಭೀಕರ ಹತ್ಯೆ ಪ್ರಕರಣ: 11 ಜನರ ವಿರುದ್ಧ ಎಫ್ಐಆರ್