ರಾಮ ಮಂದಿರ ಎಲ್ಲರಿಗೂ ಸೇರಿದ್ದು, ಇದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ : ಯತೀಂದ್ರ ಸಿದ್ದರಾಮಯ್ಯ ದಾವಣಗೆರೆ :ರಾಮ ಮಂದಿರ ಎಲ್ಲರಿಗೂ ಸೇರಿದ್ದು. ಇದು ಯಾವುದೇ ಪಕ್ಷಕ್ಕೆ ಸೇರಿದ ಮಂದಿರವಲ್ಲ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ಬಾರಿ ಚುನಾವಣೆ ಹತ್ತಿರ ಬಂದಾಗ ಏನಾದರೂ ಗಿಮಿಕ್ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ್ದರು. 2014ಕ್ಕೂ ಮುಂಚೆ ಗೋಧ್ರಾ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರು, ಬಳಿಕ 2014ರ ಚುನಾವಣೆಯಲ್ಲೂ ಇದೇ ಪ್ರಕರಣದ ಲಾಭ ಪಡೆದುಕೊಂಡು ಅಧಿಕಾರ ಪಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಪ್ರತಿ ಚುನಾವಣೆ ಸಂದರ್ಭದಲ್ಲಿ ಏನಾದರೂ ಒಂದು ವಿಷಯವನ್ನು ಇಟ್ಟುಕೊಂಡು ಬಿಜೆಪಿಯವರು ಮಾಡುವ ವರ್ತನೆ ನೋಡಿ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಈ ರೀತಿಯ ನೀಡಿರಬಹುದು ಎಂದು ಸಮರ್ಥಿಸಿಕೊಂಡರು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಈ ರಾಮಮಂದಿರ ಎಲ್ಲರಿಗೂ ಸೇರಿದ ಮಂದಿರವಾಗಿದೆ. ಇದು ಯಾವುದೇ ಪಕ್ಷಕ್ಕೆ ಸೇರಿದ ಮಂದಿರವಲ್ಲ. ರಾಮ ಮಂದಿರ ಉದ್ಘಾಟನೆಯನ್ನು ತಮ್ಮ ಪಕ್ಷದ ಕಾರ್ಯಕ್ರಮ ರೀತಿ ಮಾಡಿಕೊಂಡು, ತಾವೇ ಈ ಮಂದಿರವನ್ನು ನಿರ್ಮಿಸಿದ್ದೇವೆ ಎಂಬಂತೆ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇದು ತಪ್ಪು. ಯಾವುದೇ ಕಾಣಕ್ಕೂ ದೇವರು ಮತ್ತು ಧರ್ಮವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಬಾರದು. ಆದರೆ ಬಿಜೆಪಿಯವರು ಇದರ ಲಾಭವನ್ನು ಪಡೆಯುತ್ತಿರುವುದರಿಂದ ಎಲ್ಲರೂ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯನವರನ್ನು ರಾಮ ಮಂದಿರದ ಉದ್ಘಾಟನೆಗೆ ಅಹ್ವಾನಿಸದ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲೇ ಹೇಳಿದಂತೆ ಬಿಜೆಪಿಯವರು ರಾಮಮಂದಿರ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ರಾಜಕೀಯ ಅನುಕೂಲಕ್ಕೆ ಯಾರ್ಯಾರಿಗೆ ಆಹ್ವಾನ ನೀಡಬೇಕೋ ಅವರಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ಇಲ್ಲಿ ಧರ್ಮ ಮುಖ್ಯವಲ್ಲ, ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಜನರ ಪರ ಯಾರು ಕೆಲಸ ಮಾಡುತ್ತಾರೋ ಅದನ್ನು ನೋಡಿ ಜನರು ಮತ ಹಾಕುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬೆಳಗಾವಿಯಲ್ಲೂ ಬಿಜೆಪಿ ಪ್ರತಿಭಟನೆ