ದಾವಣಗೆರೆ:ರಾಮ ಮಂದಿರ ಉದ್ಘಾಟನೆಗೆ 20 ದಿನ ಬಾಕಿ ಇದೆ. ಕರಸೇವಕರನ್ನು, ಹಿಂದೂಪರ ಹೋರಾಟಗಾರರನ್ನು ರಾಜ್ಯ ಸರ್ಕಾರ ಹೆದರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ದೂರಿದರು.
ಹುಬ್ಬಳಿಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು ಮತ್ತೊಮ್ಮೆ ನರೆಂದ್ರ ಮೋದಿಯವರು ಪ್ರಧಾನಿ ಆಗ್ತಾರೆಂದು ಸಾಕಷ್ಟು ಸಮೀಕ್ಷೆಗಳು ಹೇಳುತ್ತಿವೆ. ಇನ್ನು ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರು ಕೂಡ ಸನಾತನ ಧರ್ಮದ ಬಗ್ಗೆ ಅವಹೇಳನ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಯ್ಯೋಧೆ ವಿಚಾರ ಕೋರ್ಟ್ನಲ್ಲಿ ನಡೆಯುವ ವೇಳೆ ಕಾಂಗ್ರೆಸ್ ಸರ್ಕಾರ ರಾಮಾಯಣ ಎಂಬುದು ಕಾಲ್ಪನಿಕ, ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದಿದ್ದರು. ಕಾಂಗ್ರೆಸ್ನವರಿಗೆ ರಾಮ ಮಂದಿರ ಕಟ್ಟುವುದು ಇಷ್ಟ ಇಲ್ಲ. ಆದರೆ ನಾವು ಪ್ರಣಾಳಿಕೆಯಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದೆವು ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ಕರಸೇವಕ ಬಂಧನ ವಿಚಾರ:ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವಾಗಿದೆ. ಈ ಸರ್ಕಾರ 30 ವರ್ಷದ ಹಿಂದಿನ ಪ್ರಕರಣವನ್ನು ಮರು ಆರಂಭಿಸಿದೆ. ನಾನು ಕೂಡ ಆ ಪ್ರಕರಣದ ಪ್ರತಿಯನ್ನು ನೋಡಿದೆ. ಅದರಲ್ಲಿ ಈಗಾಗಲೇ 3 ಜನ ಸಾವನ್ನಪ್ಪಿದ್ದಾರೆ. 5 ಜನ ಖುಲಾಸೆಗೊಂಡಿದ್ದಾರೆ. ಖುಲಾಸೆಗೊಂಡವರ ತೀರ್ಪು ಪ್ರತಿಯನ್ನು ನೋಡಿದೆ. ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಕುರಿತು ನಾನು ನಮ್ಮ ವಕೀಲರ ಬಳಿ ಪ್ರಕರಣದ ಎಫ್ಐಆರ್ ಪ್ರತಿ, ದೂರು ಪ್ರತಿ ಕಳುಹಿಸು ಎಂದಿದ್ದೆ. ಆದರೆ ಸಣ್ಣ ಚಾರ್ಜ್ ಶೀಟ್ ಇದೆ. ಇದನ್ನು ಇಟ್ಟುಕೊಂಡು ಬಿಜೆಪಿಗೆ ಕಾನೂನು ಗೊತ್ತಿದೆಯಾ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ. ನೊಟೀಸ್ ಕೊಡಬೇಕೆಂಬ ಕಾನೂನು ನಿಮಗೆ ಗೊತ್ತಿಲ್ವಾ. ಬಂಧಿಸಿರುವ ಕರಸೇವಕ ಪೊಲೀಸ್ ಠಾಣೆ ಎದುರೇ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅವನಿಗೆ ನೊಟೀಸ್ ಕೊಡದೆ ಯಾವ ಆಧಾರದ ಮೇಲೆ ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದೀರಿ? ಎಂದು ಕಿಡಿಕಾರಿದರು.