ದಾವಣಗೆರೆ: ಮುಷ್ಕರ ಕೈಬಿಡದಿದ್ದರೆ ಕೋವಿಡ್ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಎಚ್ಚರಿಕೆ ನೀಡಿದ್ದರೂ ಸಹ ಜೆಜೆಎಂ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.
ವೈದ್ಯರ ದಿನವೂ ಮುಷ್ಕರ ಮುಂದುವರಿಸಿದ ವೈದ್ಯರು, ವಿದ್ಯಾರ್ಥಿಗಳು ವೈದ್ಯರು ಮತ್ತು ವಿದ್ಯಾರ್ಥಿಗಳು ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಮನವಿ ಜೊತೆ ಎಚ್ಚರಿಕೆಯನ್ನೂ ನೀಡಿದ್ದರು. ಆದ್ರೂ ಸಹ ವೈದ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.
ಬೆಳಿಗ್ಗೆ 10 ಗಂಟೆಗೆ ಜಯದೇವ ವೃತ್ತದಲ್ಲಿ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಗುಲಾಬಿ ಹೂವು ನೀಡಿ ಶುಭ ಕೋರಿದರು. ಪ್ರತಿಭಟನೆ ಹತ್ತಿಕ್ಕಲು ಬಂದ ಪೊಲೀಸರಿಗೆ ಗುಲಾಬಿ ಹೂ ನೀಡಲು ಮುಂದಾದಾಗ ತೆಗೆದುಕೊಳ್ಳಲು ಕೆಲ ಸಿಬ್ಬಂದಿ ಹಿಂದೇಟು ಹಾಕಿದರು. ಬಳಿಕ ಪೊಲೀಸರು ಅನಿವಾರ್ಯವಾಗಿ ಹೂ ಸ್ವೀಕರಿಸಿದರು.
ಕಳೆದ 16 ತಿಂಗಳಿನಿಂದ ಶಿಷ್ಯ ವೇತನ ಬಾರದ ಕಾರಣ ನಮ್ಮ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಕೊರೊನಾ ವಿರುದ್ಧ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸಿದ್ದೇವೆ. ಈಗಲೂ ಕಾಯಕ ಬಿಟ್ಟಿಲ್ಲ. ಸೇವೆ ಮುಗಿದ ಬಳಿಕ ಇಲ್ಲಿಗೆ ಬಂದು ಮುಷ್ಕರ ನಡೆಸುತ್ತಿದ್ದೇವೆ. ನಾವು ಯಾವ ಮಾರ್ಗಸೂಚಿ ಉಲ್ಲಂಘನೆ ಮಾಡಿಲ್ಲ. ನಮ್ಮದು ನ್ಯಾಯಯುತ ಬೇಡಿಕೆ. ಈಡೇರುವವರೆಗೆ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದಿದ್ದಾರೆ.
ವೈದ್ಯರ ದಿನವೂ ಮುಷ್ಕರ ಮುಂದುವರಿಸಿದ ವೈದ್ಯರು, ವಿದ್ಯಾರ್ಥಿಗಳು ಇನ್ನು ವೈದ್ಯರು ಸಹ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ಹೋರಾಟ ನಿಜಕ್ಕೂ ಸರಿಯಾಗಿದೆ. ನಿಮ್ಮ ಬೇಡಿಕೆ ಈಡೇರಲೇಬೇಕು. ಎಲ್ಲಾ ವೈದ್ಯರು ನಿಮ್ಮೊಂದಿಗೆ ಇದ್ದೇವೆ. ಹೋರಾಟದಿಂದ ಹಿಂದೆ ಸರಿಯಬೇಡಿ ಎಂದು ವೈದ್ಯ ವಸುದೇವ್ ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.