ದಾವಣಗೆರೆ: ಕುರುಬ ಸಮಾಜಕ್ಕೆ ಎಸ್ಟಿ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲು ರಾಜ್ಯ ಕುರುಬರ ಸಂಘ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಮುದಾಯದ ಎಸ್ಟಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಕೆ.ವಿ.ಶಾಂತಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಕುರುಬ ಸಮಾಜಕ್ಕೆ ಎಸ್ಟಿ ಮಾನ್ಯತೆಗೆ ಆಗ್ರಹಿಸಿ ಹೋರಾಟ: ಕೆ.ವಿ.ಶಾಂತಪ್ಪ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಬಂಡೆಪ್ಪ ಕಾಶೆಂಪೂರ್, ಕುರುಬ ಸಮಾಜದ ಹಿರಿಯ ಮುಖಂಡರು ಹಾಗೂ ಬೆಳ್ಳೂಡಿಯ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳ ಸಮ್ಮುಖದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುವ ಸಲುವಾಗಿ ಈ ಸಮಿತಿ ರಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿ.ಶಾಂತಪ್ಪ, ಇಂದು ಬೆಳ್ಳೂಡಿಯ ಕನಕ ಗುರುಪೀಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕುರುಬ ಸಮಾಜಕ್ಕೆ ಎಸ್ಟಿ ಮಾನ್ಯತೆ ಬಗ್ಗೆ ಚರ್ಚಿಸಲಾಗಿದೆ. ಇದಕ್ಕೆ ಶ್ರೀಗಳು ಬೆಂಬಲ ಸೂಚಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ, ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು. ನಮ್ಮದು ಯಾವುದೇ ಸಮುದಾಯದ ವಿರುದ್ಧ ಅಲ್ಲ. ನಮಗೆ ಸಿಗಬೇಕಿರುವ ನ್ಯಾಯ ಸಿಗಬೇಕೆಂಬುದಷ್ಟೇ ನಮ್ಮ ಬೇಡಿಕೆ ಎಂದು ತಿಳಿಸಿದರು.
ಕಲ್ಬುರ್ಗಿ, ಯಾದಗಿರಿ ಸೇರಿದಂತೆ ಹದಿನೆಂಟು ಜಿಲ್ಲೆಗಳಲ್ಲಿ ಕುರುಬ ಸಮುದಾಯದವರಿದ್ದಾರೆ. ರಾಜ್ಯದಲ್ಲಿ 50 ರಿಂದ 55 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜ ನಮ್ಮದು. ಪಕ್ಷಾತೀತವಾಗಿ ಎಲ್ಲಾ ಪಕ್ಷದಲ್ಲಿರುವ ನಾಯಕರು ಇದಕ್ಕೆ ಬೆಂಬಲ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪನವರ ಸಲಹೆ ಪಡೆದಿದ್ದೇವೆ. ಕುಲಶಾಸ್ತ್ರ ಅಧ್ಯಯನ ಮಾಡಲಾಗುತ್ತಿದೆ. ಇದಕ್ಕೆ ಪೂರಕ ದಾಖಲೆ ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟ ಬಳಿಕ ಇದಕ್ಕೆ ಅನುಮತಿ ಸಿಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯುವ ಸಲುವಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಮೊದಲು ಹಂತ-ಹಂತವಾಗಿ ಮನವಿ ಸಲ್ಲಿಸುವ ಮೂಲಕ ಶಾಂತಿಯುತ ಹೋರಾಟ ನಡೆಸುತ್ತೇವೆ. ಸಮುದಾಯಕ್ಕೆ ಸೌಲಭ್ಯ ಸಿಗದಿದ್ದರೆ, ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಮಾಹಿತಿ ನೀಡಿದರು.