ದಾವಣಗೆರೆ :ಆಸ್ತಿ ವಿವಾದ ಹಿನ್ನೆಲೆ ಕೆಲವರು ತೋಟಕ್ಕೆ ನುಗ್ಗಿ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನನ್ನ ಕಣ್ಣ ಮುಂದೆಯೇ ನಡೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾದಾಗ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ತೋಟದ ಮಾಲೀಕ ಆನಂದ ಆರೋಪ ಮಾಡಿದ್ದಾರೆ. ಈ ಸಂಬಂಧ ಐವರ ಮೇಲೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
'ಜೆಸಿಬಿ ಬಳಸಿ ಸುಮಾರ 10 ವರ್ಷದ ಅಡಿಕೆ ಮರಗಳನ್ನು ಸರ್ವನಾಶ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಕ್ಕದ ತೋಟದ ಮಾಲೀಕರು ಹಾಗೂ ತಮ್ಮ ನಡುವೆ ಜಗಳವಿತ್ತು. ಸದ್ಯ ಅಡಿಕೆ ತೋಟ ನಮ್ಮ ಸ್ವಾಧೀನದಲ್ಲಿದೆ. ಆದರೆ, ಇದ್ದಕ್ಕಿದ್ದಂತೆ ಆರೋಪಿಗಳು ಜೆಸಿಬಿ ತಂದು ಅಡಿಕೆ ಮರಗಳ ನಾಶ ಮಾಡಿದ್ದಾರೆ. ಇನ್ನು ತೋಟದಲ್ಲಿದ್ದ ಬೋರ್ವೆಲ್ ಕೂಡ ಹಾಳು ಮಾಡಿದ್ದಾರೆ' ಎಂದು ಆರೋಪಿಸಿ ಕಣದಮನಿ ಸುರೇಶ ಹಾಗೂ ಜಗದೀಶ ಸೇರಿದಂತೆ ಒಟ್ಟು ಐವರ ವಿರುದ್ಧ ಆನಂದ ಅವರು ದೂರು ದಾಖಲಿಸಿದ್ದಾರೆ.
ಘಟನೆಯಿಂದ ತನಗೆ ಪ್ರಾಣಭಯ ಇದೆ. ಹಾಗಾಗಿ ರಕ್ಷಣೆ ನೀಡುವಂತೆಯೂ ತೋಟದ ಮಾಲೀಕ ಆನಂದ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಲೇಬೆನ್ನೂರು ಪೋಲಿಸ್ ಠಾಣೆಯ ಪೋಲಿಸರು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.