ದಾವಣಗೆರೆ: ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ತಡರಾತ್ರಿ ನಡೆದಿದೆ. ಗೌರಿಪುರ ಗ್ರಾಮದ ರಾಮಕೃಷ್ಣ (30) ಮೃತಪಟ್ಟಿರುವ ಕನ್ನಡಪರ ಹೋರಾಟಗಾರ. ಅರ್ಜುನ್ ಮತ್ತು ಪ್ರಶಾಂತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ತಾಲೂಧ್ಯಕ್ಷರಾಗಿದ್ದ ರಾಮಕೃಷ್ಣ, ಇತ್ತೀಚಿಗೆ ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಡಾಬಾದಲ್ಲಿ ಪಾರ್ಟಿ ವೇಳೆ ನಡೆದ ಗಲಾಟೆ: ಕೊಲೆಯಾದ ಜಗಳೂರಿನ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರ ರಾಮಕೃಷ್ಣನನ್ನು ಆರೋಪಿಗಳಾದ ಅರ್ಜುನ್ ಮತ್ತು ಪ್ರಶಾಂತ್ ಪಾರ್ಟಿ ಮಾಡಲು ಹೊಸಕೆರೆ ಡಾಬಾಕ್ಕೆ ಕರೆಯಿಸಿಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಸ್ನೇಹಿತರ ನಡುವೆ ವಾಗ್ವಾದ ಉಂಟಾಗಿದೆ. ಆ ಬಳಿಕ ಗಲಾಟೆ ಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿಗಳು ಕಬ್ಬಿಣದ ರಾಡ್ ಹಾಗು ಕಲ್ಲುಗಳಿಂದ ಜಜ್ಜಿ ಡಾಬಾದಲ್ಲಿಯೇ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಲು ಆರೋಪಿಗಳು ಪೂರ್ವನಿಯೋಜಿತರಾಗಿಯೇ ಬಂದಿದ್ದರು ಎಂಬ ಶಂಕೆಯನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.