ದಾವಣಗೆರೆ:ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದರೂ ಎಲ್ಲ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ಹೀಗಾಗಿ ನಗರದ ಕುಂದುವಾಡ ಕೆರೆ, ಚಿಗಟೇರಿ ಆಸ್ಪತ್ರೆ ಮುಂದಿನ ಉದ್ಯಾನ, ವಿವಿಧ ವೃತ್ತಗಳ ಅಭಿವೃದ್ಧಿ ಹಾಗೂ ಇವುಗಳ ನಿರ್ವಹಣೆಯನ್ನ ಖಾಸಗಿ ಉದ್ಯಮಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಣ್ಣೆನಗರಿ ಅಭಿವೃದ್ದಿಪಡಿಸಲು ಕೈ ಜೋಡಿಸಿದ ಖಾಸಗಿ ಉದ್ಯಮಿಗಳು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೀಡಿರುವ ಆದೇಶದ ಪ್ರಕಾರ, ಹೆಚ್ಚುತ್ತಿರುವ ವಾಯುಮಾಲಿನ್ಯ ನಗರಗಳಲ್ಲಿ ದಾವಣಗೆರೆ ನಗರವೂ ಒಂದಾಗಿದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಕೈಜೋಡಿಸಲು ಕರೆಯಲಾಗಿದ್ದ ಸಭೆಯಲ್ಲಿ, ದಾವಣಗೆರೆಯನ್ನು ಹಸಿರೀಕರಣ ಮಾಡಲು ಹಾಗೂ ಮಾಲಿನ್ಯ ಕಡಿಮೆ ಮಾಡಲು ಕೈಜೋಡಿಸುವುದಾಗಿ ಖಾಸಗಿ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣ ಎಂದೇ ಕರೆಯುವ ಕುಂದವಾಡ ಕೆರೆಯಲ್ಲಿರುವ ಕಾರಂಜಿಯನ್ನು ಅಭಿವೃದ್ಧಿ ಮಾಡಿ ನಿರ್ವಹಿಸಲು ಆರಾಧ್ಯ ಸ್ಟೀಲ್ ಆ್ಯಂಡ್ ವೈರ್‌ರೋಪ್ಸ್ ಇಂಡಸ್ಟ್ರಿ ಒಪ್ಪಿಕೊಂಡಿದ್ದು, ಕುಂದವಾಡ ಕೆರೆ, ಫುಟ್‌ಪಾತ್, ಗಾರ್ಡನಿಂಗ್ ನಿರ್ವಹಣೆಯನ್ನು ಬೆಳ್ಳೂಡಿ ಕಾರ್ಗಿಲ್ ಇಂಡಿಯಾ ಮಾಡಲಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯ ಉದ್ಯಾನದ ಅಭಿವೃದ್ಧಿ, ನಿರ್ವಹಣೆ, ನೀರಿನ ವ್ಯವಸ್ಥೆ ಮತ್ತು ಗುಂಡಿ ಮಹಾದೇವಪ್ಪ ವೃತ್ತದ ನವೀಕರಣ ಮಹಾರಾಜ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್‌ನವರು ಮಾಡಲಿದ್ದಾರೆ.
ವಿದ್ಯಾನಗರ ವೃತ್ತ, ವಿದ್ಯಾನಗರ ಎರಡನೇ ಬಸ್ ತಂಗುದಾಣ, ಉದ್ಯಾನ ನಿರ್ವಹಣೆಯನ್ನು ರಿಲಯನ್ಸ್ ಮಾರ್ಟ್ ವಹಿಸಿಕೊಂಡಿದೆ. ಕುಮಾರಪಟ್ಟಣಂ ಗ್ರಾಸಿಂ ಇಂಡಸ್ಟ್ರಿಯು ಡಿ.ಸಿ. ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಈ ಎರಡು ವೃತ್ತಗಳ ನಡುವಿನ ರಸ್ತೆಯ ವಿಭಜಕಗಳ ಅಭಿವೃದ್ಧಿಯನ್ನ ವಹಿಸಿಕೊಂಡಿದೆ. ಕುಂದೂರು ಹ್ಯಾಟ್‌ಸನ್ ಆಗ್ರೊ ಪ್ರಾಡಕ್ಟ್ಸ್ ಇಂಡಸ್ಟ್ರಿ, ಎಂಸಿಸಿಎ ಬ್ಲಾಕ್ ಅಭಿವೃದ್ಧಿ ಮಾಡಲಿದೆ. ದೇವರಾಜ ಅರಸು ವೃತ್ತವನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಜಯದೇವ ವೃತ್ತವನ್ನು ಪಾಲಿಕೆ ಅಭಿವೃದ್ಧಿ ಮಾಡಲಿದೆ. ವಿವಿಧ ವೃತ್ತಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಣೆ ಮಾಡಲು ಖಾಸಗಿ ಉದ್ಯಮಿಗಳಿಗೆ ವಹಿಸಲಾಗಿದೆ.
ಇನ್ನು, ಈ ಕೆಲಸಗಳು ಒಂದು ವಾರದೊಳಗೆ ಆರಂಭಗೊಳ್ಳಲಿವೆ. ಇನ್ನಷ್ಟು ಮಂದಿ ಉದ್ಯಮಿಗಳು, ಸಂಘಸಂಸ್ಥೆಗಳು, ಬ್ಯಾಂಕರ್‌ಗಳು ಮುಂದೆ ಬಂದರೆ ನಗರ ಪೂರ್ತಿ ಹಸಿರೀಕರಣಗೊಂಡು ಮಾಲಿನ್ಯ ಕಡಿಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.