ದಾವಣಗೆರೆ :ಖಾಸಗಿ ಬಸ್ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೆ, ಒಂದು ಬಸ್ನಲ್ಲಿ 24 (ಶೇ.50 ರಷ್ಟು) ಮಂದಿ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬೇಕು ಎಂದು ಸರ್ಕಾರದ ಆದೇಶ ಖಾಸಗಿ ಬಸ್ಗಳ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಲಾಕ್ಡೌನ್ ಸಡಿಲಿಸಿ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ತೆರೆಯಲು ಆದೇಶಿಸಿದೆ. ಆದರೆ, ಖಾಸಗಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ ಕೂಡ ಬಸ್ ಮಾಲೀಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಬಸ್ಗಳಲ್ಲಿ ಶೇ.50 ರಷ್ಟು ಅವಕಾಶ: ಆದೇಶ ಹಿಂಪಡೆಯುವಂತೆ ಆಗ್ರಹ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 300 ಖಾಸಗಿ ಬಸ್ಗಳಿವೆ. ಬಸ್ ಸಂಚರಿಸಲು ಸರ್ಕಾರ ಕೇವಲ 24 ಆಸನಗಳಿಗೆ ಸೀಮಿತಗೊಳಿದ್ದರಿಂದ ತೆರಿಗೆ ಕಟ್ಟಲು ಮಾಲೀಕರು ಹಿಂದೇಟು ಹಾಕುವಂತಾಗಿದೆ. ರಾಜ್ಯ ಸರ್ಕಾರ ಖಾಸಗಿ ಬಸ್ಗಳ ಪ್ರಯಾಣ 24 ಆಸನಗಳಿಗೆ ಸೀಮಿತಗೊಳಿಸಿ ಬಸ್ನ 54 ಆಸನಗಳ ತೆರಿಗೆ ಕಟ್ಟಿ ಎಂಬುದು ನ್ಯಾಯವಲ್ಲ. ತೆರಿಗೆ ವಿನಾಯಿತಿ ನೀಡಿ, ಇಲ್ಲವಾದಲ್ಲಿ 24 ಆಸನಗಳಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಿರಿ ಎಂದು ಖಾಸಗಿ ಬಸ್ ಮಾಲೀಕರು ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಬಸ್ಗಳು ನಿಂತಿವೆ. 6 ತಿಂಗಳ ರೋಡ್ ಟ್ಯಾಕ್ಸ್ ಮನ್ನಾ ಮಾಡಬೇಕು. ಜತೆಗೆ ಇಎಂಐ ಕಂತುಗಳು ಮುಂದಿನ ದಿನಗಳಲ್ಲಿ ಕಟ್ಟುವಂತೆ ಅನುಕೂಲ ಮಾಡಿದರೆ ಮುಂದಿನ ತಿಂಗಳು (ಜುಲೈ) 1ರಂದು ಬಸ್ಗಳು ರಸ್ತೆಗಿಳಿಯುತ್ತವೆ. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಸ್ಗಳನ್ನು ರಸ್ತೆಗಿಳಿಸಲ್ಲ. ಇನ್ನು, ಮೂರು ತಿಂಗಳ ಡಿಫರೆನ್ಸ್ ಟ್ಯಾಕ್ಸ್ ಕಟ್ಟಿದ ಬಳಿಕವೇ ಬಸ್ಗಳನ್ನು ಹೊರ ತೆಗೆಯಬೇಕಾಗಿದ್ದರಿಂದ ತಕ್ಷಣ ಎಲ್ಲಾ ರೀತಿಯ ತೆರಿಗೆಗಳಿಗೆ ವಿನಾಯಿತಿ ನೀಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಲಾಕ್ಡೌನ್ನಿಂದಾಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಮಾಲೀಕರ ಜೀವನ ಮೂರಾಬಟ್ಟೆಯಾಗಿದೆ. ಆದ್ದರಿಂದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದವರ ಕೈ ಹಿಡಿಯಲಿ ಎಂಬುದು ಖಾಸಗಿ ಬಸ್ ಮಾಲೀಕರ ಆಗ್ರಹವಾಗಿದೆ.