ದಾವಣಗೆರೆ:ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು 5.53 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆ ಆಗುವ ನಿರೀಕ್ಷೆಯಿದೆ. ರೈತರ ಹಿತದೃಷ್ಠಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಡಗಳು ಕೇಳಿಬರುತ್ತಿದೆ. ಈ ಹಿನ್ನೆಲೆ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಆಹಾರ ಸರಬರಾಜು ಇಲಾಖೆ, ಎಪಿಎಂಸಿ, ಕೃಷಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಷ 1.31 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅದಕ್ಕೆ ತಕ್ಕಂತೆ ಮಳೆ ಬಿದ್ದಿದ್ದು ಮೆಕ್ಕೆಜೋಳ ಎಲ್ಲಾ ತಾಲೂಕುಗಳಲ್ಲಿ ಚೆನ್ನಾಗಿದೆ. ನಾವು ಹೋದ ಕಡೆಯೆಲ್ಲಾ ರೈತರು, ರೈತ ಮುಖಂಡರು ಹಾಗೂ ರೈತ ಸಂಘದವರು ಮನವಿಗಳನ್ನು ನೀಡುತ್ತಿದ್ದು, ಖರೀದಿ ಕೇಂದ್ರಕ್ಕೆ ಆಗ್ರಹಿಸುತ್ತಿದ್ದಾರೆ. ನಾನೂ ಕೂಡ ಮೊನ್ನೆ ನಡೆದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪರೆನ್ಸ್ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರ ಹಿತದೃಷ್ಠಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಮನವಿ ಮಾಡಿದ್ದೇನೆ. ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸೋಣ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.