ದಾವಣಗೆರೆ: ಜಿಲ್ಲೆಯಲ್ಲಿ ಗಣೇಶೋತ್ಸವ ಈ ಬಾರಿ ವಿಶೇಷ ಮೆರುಗು ಪಡೆಯಲಿದೆ. ಕಳೆದ ಎರಡು ವರ್ಷಗಳಿಂದ ವಿಘ್ನನಿವಾರಕನಿಗೆ ಕೋವಿಡ್ ಅಡೆತಡೆಯಾಗಿತ್ತು. ಸರ್ಕಾರದ ನಿರ್ಬಂಧಗಳು, ನಿಯಮಗಳು ಉತ್ಸವಕ್ಕೆ ಕಂಠಕವಾಗಿದ್ದವು. ಆದ್ರೆ ಈ ವರ್ಷ ಗಣೇಶೋತ್ಸವಕ್ಕೆ ಸಿದ್ಧತೆ ಬಿರುಸುಗೊಂಡಿದೆ.
ಮಣ್ಣಿನ ಮೂರ್ತಿ ತಯಾರಕರ ಕಷ್ಟ-ನಷ್ಟ:ಕಳೆದ ಕೆಲವು ವರ್ಷಗಳಿಂದ ಕೊರೊನಾಗೆ ತತ್ತರಿಸಿ ಹೋಗಿದ್ದ ಗಣೇಶ ಮೂರ್ತಿ ತಯಾರಕರು ಈ ಬಾರಿ ನೂರಾರು ಬಣ್ಣ ಬಣ್ಣದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಆದ್ರೆ ಪಿಓಪಿ ಗಣೇಶ ಮೂರ್ತಿಗಳಿಂದ ದಾವಣಗೆರೆಯ ಮಣ್ಣಿನ ಗಣೇಶ ಮೂರ್ತಿ ತಯಾರಕರು ಕಂಗೆಟ್ಟಿದ್ದಾರೆ. ಚಿತ್ರಗಾರ್ ಗಲ್ಲಿಯ ನಿವಾಸಿ ವಿಜಯ್ ಕುಮಾರ್ ಅವರು ತಮ್ಮ ಮನೆಯಲ್ಲೇ ನೂರಾರು ಮಣ್ಣಿನ ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಾರೆ.
ಇವರ ಬಳಿ 500 ರೂ.ನಿಂದ ಹಿಡಿದು ಸಾವಿರಾರು ರೂಪಾಯಿವರೆಗಿನ ಗಣೇಶನ ಮೂರ್ತಿಗಳಿವೆ. ಪಿಓಪಿ ಗಣೇಶ ಮೂರ್ತಿಗಳ ಹಾವಳಿಯಿಂದ ಸಾವಿರಾರು ಮೂರ್ತಿಗಳನ್ನು ಸಿದ್ಧಪಡಿಸುವ ಬದಲು, ಈ ಬಾರಿ ಕೇವಲ 150 ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಅಲ್ಲದೇ ಬರುವ ಗ್ರಾಹಕರು ಸಹ ಮಣ್ಣಿನ ಮೂರ್ತಿಗಳನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರಂತೆ. ಹಾಗಾಗಿ ಜಿಲ್ಲಾಡಳಿತ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಬೇಕೆಂದು ವಿಜಯ್ ಕುಮಾರ್ ಒತ್ತಾಯಿಸಿದರು.
ಜನರನ್ನು ಸೆಳೆಯುತ್ತಿವೆ ಮಣ್ಣಿನ ಮೂರ್ತಿಗಳು: ವಿಜಯ್ ಕುಮಾರ್ ಅವರ ಕುಟುಂಬ ಸುಮಾರು 60 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರು ಮಾಡಿಕೊಂಡು ಬರುತ್ತಿವೆ. ಇಲಿ ಮೇಲೆ ಕೂತಿರುವ ಗಣೇಶ, ಅಂಬೇಡ್ಕರ್ ಗಣೇಶ, ಈಶ್ವರನ ಗಣೇಶ, ಸೋಫ, ಕಮಲದ ಮೇಲೆ ಕೂತಿರುವುದು, ಆನೆ ಮೇಲೆ, ಬಸವಣ್ಣನ ಮೇಲೆ ಕೂತಿರುವ ಹೀಗೆ ವಿವಿಧ ಗಣಪ ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಬೃಹತ್ ಗಣೇಶ ಮೂರ್ತಿಗಳನ್ನು ಮಹಾರಾಷ್ಟ್ರ, ಕೊಲ್ಲಪುರ್, ಪುಣೆ, ಬಾಂಬೆಯಿಂದ ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ.