ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಮಳೆ ಗಾಳಿಯಿಂದ ಯಾವುದೇ ಅನಾಹುತಗಳಾಗದಂತೆ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೆಲವು ಮುಂಜಾಗ್ರತಾ ಕ್ರಮಗಳನ್ನು ಬೆಸ್ಕಾಂನಿಂದ ತೆಗೆದುಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಬೆಸ್ಕಾಂ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಮಳೆ ಗಾಳಿಯಿಂದ ಆಗಬಹುದಾದ ತೊಂದರೆಗಳನ್ನು ನಿವಾರಿಸಲು ಕಾರ್ಯಸೂಚಿಗಳನ್ನು ರಚಿಸಿಕೊಳ್ಳಲಾಗಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳ ಸಹಕಾರದಿಂದ ಬಲವಾದ ಗಾಳಿಯಿಂದಾಗಿ ಬೀಳಬಹುದಾದ ಒಣಗಿದ ಮರಗಳನ್ನು ಗುರುತಿಸಿ ಅವುಗಳನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.
ವಿದ್ಯುತ್ ಬೀದಿ ದೀಪದ ವ್ಯವಸ್ಥೆಯನ್ನ ಪಾಲಿಕೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲಿಸಿ ಶಿಥಿಲಗೊಂಡಿರುವ ವಿದ್ಯುತ್ ಬೀದಿ ದೀಪದ ನಿಯಂತ್ರಣದ ವ್ಯವಸ್ಥೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೋವಿಡ್-19ನಿಂದಾಗಿ ಎಲ್ಲ ಶಾಲಾ, ಕಾಲೇಜ್‍ಗಳು ರಜೆಯನ್ನು ಘೋಷಿಸಿರುತ್ತವೆ. ಹಾಗಾಗಿ ಮಕ್ಕಳು, ಯುವಕರು ಗಾಳಿಪಟಗಳನ್ನು ಹಾರಿಸುವುದು ಸಾಮಾನ್ಯವಾಗಿ ಕಂಡು ಬಂದಿದೆ.
ಹೀಗೆ ಗಾಳಿಪಟ ಹಾರಿಸುವಾಗ ಕೆಲವೊಮ್ಮೆ ದಾರ ತುಂಡಾಗಿ ಗಾಳಿಪಟಗಳು ವಿದ್ಯುತ್ ಮಾರ್ಗಗಳಿಗೆ ಸಿಕ್ಕಿಕೊಳ್ಳುವುದರಿಂದ ಗಾಳಿಪಟಗಳನ್ನು ಬಿಡಿಸಿಕೊಳ್ಳಲು ಹೋದಾಗ ಆಕಸ್ಮಿಕವಾಗಿ ಅವಘಡಗಳು ಸಂಭವಿಸಿರುವ ಉದಾಹರಣೆಗಳು ಇವೆ. ಆದ್ದರಿಂದ ಸಾರ್ವಜನಿಕರು, ಚಿಕ್ಕ ಮಕ್ಕಳು ಬಯಲಿನಲ್ಲಿ ಅಥವಾ ಕಟ್ಟಡಗಳ ಮೇಲೆ ಗಾಳಿಪಟ ಹಾರಿಸುವಾಗ ಗಮನ ವಹಿಸುವುದು ಅವಶ್ಯಕವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇನ್ನು ವಿದ್ಯುತ್ ಮಾರ್ಗಕ್ಕೆ ತಗುಲಿ ತುಂಡಾದ ಗಾಳಿಪಟದ ದಾರವು ಒದ್ದೆಯಾದಲ್ಲಿ ಮಾರ್ಗ ತೊಂದರೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಿ ಬೆ.ವಿ.ಕಂನೊಂದಿಗೆ ಸಹಕರಿಸಬೇಕೆಂದು ದಾವಣಗೆರೆ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್.ಕೆ ಪಾಟೀಲ್ ತಿಳಿಸಿದ್ದಾರೆ.