ದಾವಣಗೆರೆ: ಹರ ಜಾತ್ರೆಯ ಆಹ್ವಾನ ಪತ್ರಿಕೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕಳುಹಿಸಲಾಗಿತ್ತು. ಅವರು ನಮಗೆ ಕರೆ ಮಾಡಿ ಸದ್ಯಕ್ಕೆ ಕೊರೊನಾ ಹೆಚ್ಚಾಗುತ್ತಿದೆ, ಹರ ಜಾತ್ರೆ ಬೇಡ ಅನಿಸುತ್ತದೆ, ಮುಂದೂಡಲ್ಪಟ್ಟರೆ ಒಳ್ಳೆಯದಾಗುತ್ತದೆ ಎಂದು ಸಲಹೆ ನೀಡಿದ್ದಕ್ಕೆ ಇದೇ ಜನವರಿ 14 ಹಾಗು 15 ಕ್ಕೆ ನಡೆಯಬೇಕಿದ್ದ ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಯವರು ತಿಳಿಸಿದರು.
ಹರಿಹರದ ತಮ್ಮ ಮಠದಲ್ಲಿ ಮಾತನಾಡಿದ ಅವರು, ಸಮುದಾಯದ ಬಗ್ಗೆ ದೂರವಾಣಿ ಕರೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ವೇಳೆ ವೆಂಕಯ್ಯ ನಾಯ್ಡು ಅವರು ಕಿತ್ತೂರಿನ ರಾಣಿ ಚೆನ್ನಮ್ಮರವರ ಬಗ್ಗೆ ನಮಗೆ ಗೊತ್ತಿದೆ. ಅವರ ಪ್ರತಿಮೆಯನ್ನು ಸಂಸತ್ ಆವರಣದಲ್ಲಿ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಜನವರಿ 14 ರಂದು ಸಿಎಂ ಗೆ ತುಂಗಭದ್ರಾ ಆರತಿಗೆ ಅಡಿಗಲ್ಲು ಹಾಕಲು ಮನವಿ ಮಾಡಿದ್ದೇವೆ. ಸಿಎಂ ಬೊಮ್ಮಾಯಿಯವರು ದಿನಾಂಕ ಕೊಟ್ಟರೆ ಅಡಿಗಲ್ಲು ಹಾಕುತ್ತೇವೆ ಎಂದು ಹೇಳಿದರು.