ದಾವಣಗೆರೆ: ಆ ವಿದ್ಯಾರ್ಥಿನಿಗೆ ಡಾಕ್ಟರ್ ಆಗ್ಬೇಕು, ಜನ್ರ ಸೇವೆ ಮಾಡ್ಬೇಕೆಂಬ ಆಸೆ ಇದೆ. ಆದ್ರೆ ಬಡತನ ಎಂಬುದು ಆ ಯುವತಿಗೆ ಅಡ್ಡಿಯಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡಿದ್ರೇ ಜೀವನದ ಬಂಡಿ ಸಾಗುತ್ತೆ. ಇಂತಹ ಬಡತನದಲ್ಲಿ ವಿದ್ಯಾರ್ಥಿನಿಗೆ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್ ಏನೋ ಸಿಕ್ಕಿದೆ. ಆದ್ರೆ ಒಂದು ವರ್ಷಕ್ಕೆ ಬೇಕಾಗುವ ಎರಡು ಲಕ್ಷ ರೂಪಾಯಿ ಹಣವನ್ನು ಹೊಂದಿಸಲು ಆ ಬಡ ಕುಟುಂಬ ಸಾಧ್ಯವಾಗುತ್ತಿಲ್ಲ.
ಹೌದು, ಇಲ್ಲಿನ ಕೆಟಿಜೆ ನಗರದ ನಿವಾಸಿ ಸುರೇಶ್ ಅವರ ಪುತ್ರಿ ಮಮತಾ ಬಡತನದಲ್ಲಿ ಅರಳಿದ ಪ್ರತಿಭೆ.. ಶೈಕ್ಷಣಿಕವಾಗಿ ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಜೊತೆಗೆ ಓದಿ ಡಾಕ್ಟರ್ ಆಗ್ಬೇಕೆಂಬ ಕನಸು ಕಂಡಿದ್ದಾರೆ. ಅದರಂತೆ ಯಾದಗಿರಿಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸರ್ಕಾರಿ ಕೋಟಾದಡಿ ಸೀಟ್ ಏನೋ ಸಿಕ್ಕಿದೆ. ಆದ್ರೆ ಕಾಲೇಜಿಗೆ ಕಟ್ಟಲು ಹಣ ಇಲ್ಲದೆ ಇಡೀ ಕುಟುಂಬ ಹೈರಾಣಾಗಿದೆ. ದಾವಣಗೆರೆ ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವ್ಯಾಸಂಗ ಮಾಡಿದ್ದು, ಶೇ 98.8% ಅಂಕ ಪಡೆದು ಮಮತಾ ತೇರ್ಗಡೆಯಾಗಿದ್ದಾರೆ.
ಇದರ ಬೆನ್ನಲ್ಲೇ ಯಾದಗಿರಿಯ ಎಂಬಿಬಿಎಸ್ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ಕೂಡ ದೊರೆತಿದ್ದು, ವಿದ್ಯಾರ್ಥಿನಿ ಮಮತಾ ನೀಟ್ ಪರೀಕ್ಷೆಯಲ್ಲೂ ಕೂಡ 65183 ನೇ ರ‍್ಯಾಂಕ್ ಗಳಿಸಿದ್ದಾರೆ. ಇದರಿಂದ ಒಂದು ವರ್ಷಕ್ಕೆ ಎರಡು ಲಕ್ಷ ಹಣ ಕಟ್ಟಲಾಗದೆ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಮಮತಾ ಅವರ ತಂದೆ ಸುರೇಶ್ ಅವರು ಕೂಡ ಬೇರೆಯವರ ಸೈಕಲ್ ಶಾಪ್‌ನಲ್ಲಿ ಕೆಲಸ ಮಾಡ್ತಿದ್ದಾರೆ.
ನೆರವಿಗೆ ಮೊರೆಯಿಟ್ಟ ವಿದ್ಯಾರ್ಥಿನಿ:ತಂದೆ ದುಡಿದ ಹಣ ಮೂರು ಜನ ಮಕ್ಕಳು ಹಾಗು ಮಡದಿಯಿಂದ ಸೇರಿದ ಕುಟುಂಬದ ನಿರ್ವಹಣೆಗೆ ಸರಿ ಹೋಗುತ್ತೆ. ಆದ್ರೆ ಮೆಡಿಕಲ್ ಓದುವ ಸಜ್ಜಾಗಿರುವ ಮಗಳ ಭವಿಷ್ಯ ಬಡತನದಿಂದ ಕತ್ತಲಾಗುವ ಭಯ ಕಾಡುತ್ತಿದೆ. ಒಂದು ವರ್ಷಕ್ಕೆ ಎರಡು ಲಕ್ಷ ರೂಪಾಯಿ ಫೀಸ್ ಸಂದಾಯ ಮಾಡ್ಬೇಕಾಗಿದೆ. ಯಾದಗಿರಿಯ ಎಂಬಿಬಿಎಸ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಸಿಕ್ಕಿದೆ. ಸಹೃದಯಿಗಳು ಹಣದ ಸಹಾಯ ಮಾಡಿದ್ರೇ ತನ್ನ ವಿದ್ಯಾಭ್ಯಾಸಕ್ಕೆ ಮತ್ತು ಭವಿಷ್ಯದಲ್ಲಿ ಸಮಾಜದ ಬಡವರಿಗೆ ಸೇವೆ ಮಾಡಲು ಅನುಕೂಲ ಆಗಲಿದೆ ಅಂತಾರೆ ಸಾಧಕಿ ಮಮತಾ.
ಮನೆ ನಿರ್ವಹಣೆ ಮಾಡುವುದು ಕಷ್ಟ: ಇನ್ನು ಕಷ್ಟಪಟ್ಟು ತನ್ನ ಮಗಳಿಗೆ ಶಿಕ್ಷಣ ಕೊಡಿಸಿರುವ ಸುರೇಶ್ ಈಗಾಗಲೇ ಅವರಿವರ ಹತ್ತಿರ ಸಾಲ ಪಡೆದು 75 ಸಾವಿರ ಹಣ ಸಂದಾಯ ಮಾಡಿ ಮಗಳನ್ನು ಕಾಲೇಜಿಗೆ ದಾಖಲು ಮಾಡಿದ್ದಾರೆ. ಆದರೆ ಇನ್ನು ವಿದ್ಯಾರ್ಥಿನಿಲಯಕ್ಕೆ ಕಟ್ಟಲು ಹಣ ಇಲ್ಲದೆ ಪರದಾಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮ ಮಗಳಿಗೆ ಓದಿಸಿದ ತಂದೆ ಸುರೇಶ್ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಒದಗಿಸುವಷ್ಟು ಶಕ್ತರಾಗಿಲ್ಲ. ಒಟ್ಟಾರೆ ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಸಂಪಾದನೆ ಮಾಡುವ ಹಣ ಮನೆ ನಿರ್ವಹಣೆ ಮಾಡಲು ಆಗುವುದಿಲ್ಲ, ಸೈಕಲ್ ಶಾಪ್ ನಲ್ಲಿ ಕೆಲಸ ಮಾಡುವುದರಿಂದ ಹಣದ ತೊಂದರೆಯಾಗಿದೆ ಸ್ವಾಮಿ ಎಂದು ತಂದೆ ಸುರೇಶ್ ಅವರು ಸಹೃದಯಿಗಳು ನೆರವು ನೀಡುವಂತೆ ಅಂಗಲಾಚಿದ್ದಾರೆ.