ದಾವಣಗೆರೆ: ಹರಿಹರ ಬಳಿಯ ತುಂಗಭದ್ರ ನದಿಯಿಂದ ಚಿತ್ರದುರ್ಗದ ಭರಮಸಾಗರ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಆದರೆ ಈ ಕಾಮಗಾರಿಯಿಂದಾಗಿ ಬಡ ಕುಟುಂಬವೊಂದು ಬೀದಿಗೆ ಬಂದ ಘಟನೆ ದಾವಣಗೆರೆಯ ಹೆಬ್ಬಾಳ್ ಗ್ರಾಮದಲ್ಲಿ ನಡೆದಿದೆ.
ಹೌದು, ಕಾಮಗಾರಿಯಿಂದ ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದ ಓಬಮ್ಮ ಮತ್ತು ಮಹಾಂತೇಶ್ ಸಂಸಾರ ಬೀದಿಗೆ ಬಂದಿದ್ದು, ಅಧಿಕಾರಿಗಳ ವಿರುದ್ಧ ನೊಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಓಬಮ್ಮ ದಂಪತಿ ಮನೆಯಿದೆ. ಈ ಹಿಂದೆ ಹೆದ್ದಾರಿ ಆರು ಪಥವಾದಾಗ ಒಂದಿಷ್ಟು ಜಾಗ ಕಳೆದುಕೊಂಡಿದ್ದ ಈ ಬಡಕುಟುಂಬ, ಉಳಿದ ಜಾಗದಲ್ಲಿ ಮನೆ, ದನ-ಕರು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ಇರುವ ಸ್ಪಲ್ಪ ಜಾಗದ ಮೇಲೂ ಸರ್ಕಾರದ ಕಣ್ಣು ಬಿದ್ದಿದ್ದು, ಇದ್ದ ಮನೆಯೊಂದು ಕಾಮಗಾರಿಗೆ ಬಲಿಯಾಗಿದೆ.
ಅಧಿಕಾರಿಗಳ ವಿರುದ್ಧ ನೊಂದ ಮಹಿಳೆ ಆಕ್ರೋಶ 'ಕಾಮಗಾರಿ ಆರಂಭಿಸುವ ಮುನ್ನ ಪರಿಹಾರ ನೀಡಿ, ಕಾಮಗಾರಿ ಬಗ್ಗೆ ಮಾಹಿತಿ ನೀಡಬೇಕು. ಅದ್ರೆ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಮಾಹಿತಿ ನೀಡದೆ ಏಕಾಏಕಿ ಜೆಸಿಬಿ ತಂದು ಕಾಲುವೆಗೆ ಪೈಪ್‌ಲೈನ್ ಕಾರ್ಯ ಪ್ರಾರಂಭಿಸಿದ್ದಾರೆ' ಎಂದು ನೊಂದ ಮಹಿಳೆ ಓಬಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪೈಪ್‌ಲೈನ್ ಅಳವಡಿಕೆ ವೇಳೆ ಓಬಮ್ಮ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಅವರೊಂದಿಗೂ ಸಹ ಮಹಿಳೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ಬಳಿಯ ತುಂಗಭದ್ರ ನದಿಯಿಂದ ಚಿತ್ರದುರ್ಗದ ಭರಮಸಾಗರದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಈಗಾಗಲೇ ಸುಮಾರು 56 ಕಿಲೋ ಮೀಟರ್ ಪೈಪ್ ಲೈನ್ ಅಳವಡಿಸಲಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಬಡವರ ಮನೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆರೋಗ್ಯ ಕೇಂದ್ರವನ್ನು ನೆಲಸಮ ಮಾಡಲಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರು ಮನವಿ ಮಾಡಿದ್ದಾರೆ.