ದಾವಣಗೆರೆ: ಜಿಲ್ಲೆಯಲ್ಲಿ ಇನ್ಸುರೆನ್ಸ್ ಕಂಪನಿಗಳಿಗೆ ಮೋಸ ಮಾಡಿ ಮುಗ್ಧ ಜನರಿಂದ ಲಕ್ಷಗಟ್ಟಲೇ ಹಣ ಲೂಟಿ ಮಾಡುವ ಗ್ಯಾಂಗ್ವೊಂದು ಸಕ್ರಿಯವಾಗಿದೆ. ಈಗ ಈ ಖದೀಮರ ಗುಂಪಿನ ಹಿಂದೆ ಪೊಲೀಸರು ಬೆನ್ನತ್ತಿ ಹೊರಟಿದ್ದಾರೆ.
ಈ ಗ್ಯಾಂಗ್ನ ಕುತಂತ್ರವೇನು ಗೊತ್ತಾ?: ಕ್ಯಾನ್ಸರ್ ರೋಗಿಗಳನ್ನು ಹುಡುಕಿ ಅವರನ್ನು ಪುಸಲಾಯಿಸಿ ನಿಮಗೆ ಹಣ ಬರುವಂತೆ ಮಾಡುತ್ತೇವೆ ಎಂದು ಅವರಿಗೆ ಈ ಗ್ಯಾಂಗ್ನ ಸದಸ್ಯರು ನಂಬಿಸುತ್ತಾರೆ. ಬಳಿಕ ದಾಖಲೆಗಳನ್ನು ಪಡೆದುಕೊಂಡು ರೋಗಿಗಳ ಹೆಸರಿಗೆ ವಿಮೆ ಮಾಡಿಸಿ ಇನ್ಸುರೆನ್ಸ್ ಕಂಪನಿಗಳಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಕ್ಷಗಟ್ಟಲೇ ಲೂಟಿ ಮಾಡುತ್ತಿರುವ ಗುಂಪನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದಾವಣಗೆರೆ ಮೂಲದ ವಾಗೇಶ್, ಶಿಕ್ಷಕರಾದ ರವಿ, ಪಿಎಂ ಮಹೇಶ್ವರಯ್ಯ, ಅನಿಲ್ ಕುಮಾರ್, ಚಂದ್ರು ಬ್ಯಾಂಕ್ ಉದ್ಯೋಗಿ ಶಿವಕುಮಾರ್, ಚೇತನ್ ನರಗನಹಳ್ಳಿ, ವಿನೋದ್ ರೆಡ್ಡಿ, ಹನುಮಂತರೆಡ್ಡಿ, ರಾಜಶೇಖರ್ ರೆಡ್ಡಿ ಸೇರಿದಂತೆ ಒಟ್ಟು 10 ಜನ ಆರೋಪಿಗಳಾಗಿದ್ದಾರೆ. ಬ್ಯಾಂಕ್ ಇನ್ಸುರೆನ್ಸ್ ಕಂಪನಿ, ಶಾಲೆ, ಐಟಿ ರಿಟರ್ನ್, ಜನ್ಮದಿನ ಪತ್ರ ಸೇರಿದಂತೆ ಹೀಗೆ ಹಲವು ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಲಕ್ಷದಿಂದ ಕೋಟಿವರೆಗಿನ ಹಣವನ್ನು ಲಪಟಾಯಿಸುವುದೇ ಇವರ ಕಾಯಕವಾಗಿದೆ.
ಹರಪನಹಳ್ಳಿ ತಾಲೂಕು ಜಂಗಮ ತುಂಬಿಗೆರೆ ಟಿಎಂ ಬೋಗೇಶ್ವರಯ್ಯ ಎಂಬುವರಿಗೆ ಒಮ್ಮೆ ಗಂಟಲು ನೋವು ಬಂದಿತ್ತು. ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದರು. ಇವರನ್ನು ಸಂಪರ್ಕಿಸಿದ ಗ್ಯಾಂಗ್ ವಿಮೆ ಮಾಡಿಸುತ್ತೇವೆ ಎಂದು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡರು. ಮೂರು ಹೊತ್ತಿನ ಊಟಕ್ಕೂ ಪರದಾಡುವ ಬೋಗೇಶ್ವರಯ್ಯ ಕುಟುಂಬ ಸಣ್ಣಪುಟ್ಟ ಅಡುಗೆ ಕಂಟ್ರಾಕ್ಟರ್ ಹಿಡಿದು ಜೀವನ ಸಾಗಿಸುತ್ತದೆ. ಅವರ ಹೆಸರಿಗೆ ನಕಲಿ ಐ ಟಿ ರಿಟರ್ನಸ್ ರೆಡಿ ಮಾಡಿ ನಕಲಿ ಆದಾಯ ತೆರಿಗೆ ಮಾಡಿಸಿ ಖಾಸಗಿ ವಿಮಾ ಕಂಪನಿಯಲ್ಲಿ ತಲಾ 50 ಲಕ್ಷದ ಎರಡು ವಿಮಾ ಪಾಲಿಸಿ ಮಾಡಿಸಿದ್ದಾರೆ. ಬೋಗೇಶ್ವರಯ್ಯನ ಹೆಸರಿಗೆ ಒಂದು ಅಕೌಂಟ್ ಮಾಡಿಸಿ ಎಲ್ಲಾ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಬೋಗೇಶ್ವರಯ್ಯನಿಗೆ ಬಂದ ಹಣವನ್ನು ದೋಚಿದ್ದಾರೆ ಖದೀಮರು.
ಮತ್ತೊಂದು ಪ್ರಕರಣದಲ್ಲಿ ಗಡಿಗುಡಾಳ್ ವಟ್ಟೇರ ಮೂಗಪ್ಪ ಗ್ರಾಮದ ಕ್ಯಾನ್ಸರ್ ಪೇಶೆಂಟ್ನ ಹೆಸರಿಗೆ ಇನ್ಸುರೆನ್ಸ್ ಮಾಡಿಸಿ ಅವರ ಹೆಸರಿನಲ್ಲಿ 12.50 ಲಕ್ಷ ರೂ.ಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ. ಗಡಿಗುಡಾಳ್ ವಟ್ಟೇರ್ ಮೂಗಪ್ಪನಿಗೆ ಕ್ಯಾನ್ಸರ್ ಕೊನೆ ಸ್ಟೇಜ್ ಇರುವುದು ಖಚಿತವಾದ ನಂತರ ಅವರ ಮನೆಗೆ ಹೋಗಿ ನಿಮಗೆ ದುಡ್ಡು ಬರುವಂತೆ ಮಾಡುತ್ತೇವೆಂದು ಮೂಲ ದಾಖಲೆಗಳನ್ನು ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ವಟ್ಟೇರ ಮೂಗಪ್ಪ ಅವರ ಪತ್ನಿ ಹೆಂಡತಿ ಗೌರಮ್ಮ ಸಹೋದರರು ವಂಚಕರ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ಠಾಣೆಯಿಂದ ಈ ಪ್ರಕರಣವನ್ನು ಡಿಸಿಆರ್ಬಿ ಪೊಲೀಸರಿಗೆ ವರ್ಗಾವಣೆ ಆಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ಅಮಾಯಕರಿಗೆ ವಂಚಿಸಿರುವ ಖದೀಮರ ಗ್ಯಾಂಗ್ನ್ನು ಈ ಹಿಂದೆ ಡಿಸಿಆರ್ಬಿ ಪೊಲೀಸರು ಬಂಧಿಸಿ ಬೆಳೆ ಕಳೆದುಕೊಂಡ ರೈತರಿಗೆ 1.62 ಕೋಟಿ ರೂಗಳನ್ನು ವಾಪಸ್ ಕೊಡಿಸಿದ್ದರು. ಈ ವಂಚಕರ ಗ್ಯಾಂಗ್ ರೈತರಿಗಲ್ಲದೇ ಜನಸಾಮಾನ್ಯರಿಗೆ ವಂಚಿಸಿದ್ದು, ಡಿಸಿಆರ್ಬಿ ಪೊಲೀಸರು ಸೂಕ್ತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕಿದೆ.
ಓದಿ:ಬೆಂಗಳೂರು: ಕೈ ಕಾಲು ಕಟ್ಟಿ ನಿವೃತ್ತ ಶಿಕ್ಷಕಿಯ ಬರ್ಬರ ಹತ್ಯೆ, ಚಿನ್ನಾಭರಣ ಲೂಟಿ