ದಾವಣಗೆರೆ : ಜಿಲ್ಲೆಯಲ್ಲಿ ಕೆಲ ಕಡೆ ಶಾಂತಿ ಕದಡಲು ಕೆಲವರ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ದಾವಣಗೆರೆ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲೆಯ ಹರಿಹರ, ಮಲೇಬೆನ್ನೂರು, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಗಳಲ್ಲಿ ಎರಡು ಕೋಮುಗಳ ನಡುವೆ ಈಗಾಗಲೇ ಗಲಾಟೆಯಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದರ ಬೆನ್ನಲ್ಲೇ ದಾವಣಗೆರೆ ಪೊಲೀಸರು ನಗರದ್ಯಾಂತ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ನಗರದ ದುರ್ಗಾಂಭಿಕ ದೇವಾಲಯದಿಂದ ಆರಂಭವಾದ ಪೊಲೀಸರ ಪಥ ಸಂಚಲನ ಹೊಂಡದ ವೃತ್ತ, ಜಾಲಿ ನಗರ, ಹಗೆದಿಬ್ಬ ವೃತ್ತ, ಮದೀನ ಆಟೋ ನಿಲ್ದಾಣ, ಅಹ್ಮದ್ ನಗರ, ಆಝಾದ್ ನಗರ, ಬಾಷಾ ನಗರ, ಮಂಡಕ್ಕಿ ಭಟ್ಟಿ ಲೇಔಟ್ ನಿಂದ ಸಾಗಿ ಅರಳಿ ಮರ ವೃತ್ತಕ್ಕೆ ಕೊನೆ ಮಾಡಲಾಯಿತು.
ಇದರಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿದ್ದು, ಶಿಸ್ತಿನಿಂದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದ ಪೊಲೀಸರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಇದಲ್ಲದೇ ಯಾವುದೇ ಕೋಮಿಗೆ ಸಂಬಂಧಿಸಿದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸಲಾಗಿದ್ದು, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.