ಕರ್ನಾಟಕ

karnataka

ETV Bharat / state

ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ಖದೀಮರ ಬಂಧನ - ಕಳ್ಳರ ಬಂಧನ

ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೆಬೆನ್ನೂರು ಹಾಗೂ ಚಿಕ್ಕಬಳ್ಳಾಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಿಕೆ ಹಾಗೂ ಚಿನ್ನಾಭರಣ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Davanagere

By

Published : Aug 20, 2019, 4:57 AM IST

ದಾವಣಗೆರೆ :ಏಳು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8.75 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಅಡಿಕೆಯನ್ನು ವಶಪಡಿಸಿಕೊಡಿದ್ದಾರೆ.

ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರಿನ ರಮೇಶ್ ಹಾಗೂ ಆತನ ಸಂಬಂಧಿ ವಸಂತ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳ ವಿರುದ್ಧ ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೆಬೆನ್ನೂರು ಹಾಗೂ ಚಿಕ್ಕಬಳ್ಳಾಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಿಕೆ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಪ್ರಕರಣಗಳು ದಾಖಲಾಗಿದ್ದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸುದ್ದಿಗೋಷ್ಠಿ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 218 ಗ್ರಾಂ ಚಿನ್ನಾಭರಣ ಹಾಗೂ 5 ಕ್ವಿಂಟಾಲ್ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಒಟ್ಟು 7 ಪ್ರಕರಣಗಳು ದಾಖಲಾಗಿವೆ.

2010 ರಲ್ಲಿ ಚನ್ನಗಿರಿ ತಾಲೂಕಿನ ಆಕಳಕಟ್ಟೆ ಗ್ರಾಮದಲ್ಲಿ ರಮೇಶ ಮತ್ತು ಇತರೆ ನಾಲ್ವರು ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ಸುಮಾರು 30 ತೊಲ ಬಂಗಾರ ದೋಚಿದ್ದರು. ಈ ಪ್ರಕರಣಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ರಮೇಶ್ ಹೈಕೋರ್ಟ್​ಗೆ ಹೋಗಿದ್ದ. ಅಲ್ಲಿಯೂ ಮನವಿ ತಿರಸ್ಕೃತಗೊಂಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದ ರಮೇಶ್​ಗೆ ಅಲ್ಲಿಯೂ ಜಯ ಸಿಗಲಿಲ್ಲ.

ಕಳೆದ ಎರಡು ವರ್ಷಗಳ ಹಿಂದೆ ಅಪೀಲು ತಿರಸ್ಕೃತಗೊಂಡು ಸುಪ್ರೀಂಕೋರ್ಟ್​ನಲ್ಲಿ ಶಿಕ್ಷೆ ಖಾಯಂ ಆಗಿತ್ತು. ಜಾಮೀನಿನ ಮೇಲೆ ಹೊರಗಿದ್ದ ರಮೇಶ್ ಶಿಕ್ಷೆ ಆದ ಮೇಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಕಳೆದ ಎರಡೂ ವರ್ಷಗಳಿಂದಲೂ ತನ್ನ ಸಂಬಂಧಿ ವಸಂತನ ಜೊತೆ ಸೇರಿಕೊಂಡು ಏಳು ಕಡೆ ಕಳವು ಮಾಡಿದ್ದ ರಮೇಶ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.

ABOUT THE AUTHOR

...view details