ಕರ್ನಾಟಕ

karnataka

ETV Bharat / state

ಬೆಣ್ಣೆನಗರಿ ದಾವಣಗೆರೆ ಜನರು ಉಸಿರಾಡುವ ಗಾಳಿಯಲ್ಲೇ ವಿಷ...! ಎಚ್ಚರ... ಎಚ್ಚರ... - ವಿಷ

ರಾಜ್ಯದ ನಾಲ್ಕು ನಗರಗಳಲ್ಲಿ ಸೇವಿಸುತ್ತಿರುವ ಗಾಳಿಯಲ್ಲಿ ವಿಷಕಾರಿ ಅಂಶವಿದೆ ಎಂಬ ಆಘಾತಕಾರಿ ಅಂಶವೊಂದು ಹೊರಬಿದ್ದಿದ್ದು, ಈ ಪೈಕಿ ಸ್ಮಾರ್ಟ್ ಸಿಟಿ ದಾವಣಗೆರೆಯೂ ಸೇರಿದೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ.

ಗಾಳಿಯಲ್ಲಿ ವಿಷಕಾರಿ ಅಂಶ

By

Published : May 13, 2019, 10:51 AM IST

Updated : May 13, 2019, 11:09 AM IST

ದಾವಣಗೆರೆ:ಅನ್ನ, ನೀರು ಕಲುಷಿತವಾದರೆ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಆದ್ರೆ, ಉಸಿರಾಡುವ ಗಾಳಿಯಲ್ಲಿ ವಿಷವಿದೆ ಅಂದ್ರೆ ಹೇಗಾಗಬಾರದು..! ಇಂತಹದ್ದೇ ಒಂದು ಆಘಾತಕಾರಿ ಸುದ್ದಿ ಜಿಲ್ಲೆಯ ಜನರಲ್ಲಿ ಭಯಹುಟ್ಟಿಸಿದೆ.

ನಿತ್ಯವೂ ಉಸಿರಾಡಲು ಶುದ್ಧ ಗಾಳಿ ಅತ್ಯವಶ್ಯಕ. ಆದ್ರೆ, ಉಸಿರು ನೀಡುವ ಗಾಳಿಯೇ ವಿಷವಾಗುತ್ತಿದೆ ಎಂಬ ಅಂಶ ಗೊತ್ತಾಗುತ್ತಿದ್ದಂತೆ ಕೇಂದ್ರ ಪರಿಸರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ದೇಶದಲ್ಲಿ ಹೆಚ್ಚು ವಾಯುಮಾಲಿನ್ಯವಾಗುತ್ತಿರುವ ಕೆಲ ನಗರಗಳಿಗೆ ನಿರಂತರ ವಾಯು ಗುಣಮಟ್ಟ ಅಳತೆ ಮಾಡುವ ಯಂತ್ರ ಪೂರೈಕೆ ಮಾಡಿದೆ. ಇಂತಹ ಹೈ ಅಲರ್ಟ್ ಘೋಷಿಸಲಾಗಿರುವ ಸಿಟಿಗಳಲ್ಲಿ ರಾಜ್ಯ ಸ್ಮಾರ್ಟ್ ಸಿಟಿ ದಾವಣಗೆರೆ ಕೂಡ ಒಂದು. ಇದು ಬೆಣ್ಣೆನಗರಿ ಮಂದಿಯ ನಿದ್ದೆ ಕೆಡಿಸಿದೆ.

ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ದಾವಣಗೆರೆ ನಗರದಲ್ಲಿ ಸಾಮಾನ್ಯವಾಗಿ ಬೀಸುವ ಗಾಳಿಯಲ್ಲಿನ ಜೀವ ವಿರೋಧ ಕಣಗಳ ಪ್ರಮಾಣ ನೂರು ಪಟ್ಟು ಹೆಚ್ಚು ಇರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ. ನಗರದ ಅರುಣಾ ಸರ್ಕಲ್, ಹೊಸ ಬಸ್ ನಿಲ್ದಾಣ ಹಾಗೂ ಅತೀ ಹೆಚ್ಚು ಅಂದ್ರೆ ಆಜಾದ್ ನಗರ ಮತ್ತು ಭಾಷಾ ನಗರದ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ವಿಷ ಗಾಳಿ ಜಾಸ್ತಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆ ಕೇಂದ್ರ ಪರಿಸರ ಇಲಾಖೆ ದಾವಣಗೆರೆ ಮೇಲೆ ನಿಗಾ ಇಟ್ಟಿದೆ. ದಿನದ 24 ಗಂಟೆಯೂ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗ ಬಗ್ಗೆ ನಿರಂತರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯನ್ನು ದೆಹಲಿಯ ಪರಿಸರ ಇಲಾಖೆ ಪ್ರಧಾನ ಕಚೇರಿಗೂ ನೀಡಲಾಗುತ್ತಿದೆ. ವಾಯು, ಶಬ್ಧ ಮಾಲಿನ್ಯ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಅಂತಾರೆ ಪ್ರಾದೇಶಿಕ ಪರಿಸರ ಅಧಿಕಾರಿ ಕೊಟ್ರೇಶ್.

ಜಿಲ್ಲೆಯ ಜನರಲ್ಲಿ ಭಯಹುಟ್ಟಿಸಿದ ವಿಷಕಾರಿ ಗಾಳಿ

ನಗರದ ಕೆಲ ಪ್ರದೇಶದಲ್ಲಿ ಬೀಸುವ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಾಗಿವೆ. ಮಣ್ಣಿನ ಧೂಳು, ಮಂಡಕ್ಕಿಯ ಹೊಗೆ, ತೌಡು, ವಾಹನಗಳಿಂದ ಬರುವ ಹೊಗೆ ಸೇರಿದಂತೆ ಹತ್ತು ಹಲವು ಕಾರಣಕ್ಕಾಗಿ ಕೇಂದ್ರ ಪರಿಸರ ಇಲಾಖೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಜೀವ ವಿರೋಧಿ ಕಣಗಳು ಇಲ್ಲಿ ಬೀಸುವ ಗಾಳಿಯಲ್ಲಿ ಸೇರಿಕೊಂಡಿದೆ. ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಹೆಚ್ಚಾಗಿ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರೆ, ಕೆಲವರು ಕ್ಷಯ ರೋಗಕ್ಕೂ ತುತ್ತಾಗಿದ್ದಾರೆ. ಹಾಗಾಗಿ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎನ್ನುವುದು ವೈದ್ಯರು ಹೇಳುವ ಮಾತು.

ವಾಯು, ಶಬ್ಧ ಮಾಲಿನ್ಯ ತಡೆಗೆ ಹತ್ತಾರು ಯೋಜನೆ ರೂಪಿಸಿ, ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ. ಉಸಿರಾಡಲು ಶುದ್ಧ ಗಾಳಿ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕಿದೆ. ವಿಷಪೂರಿತ ಗಾಳಿ ಶುದ್ಧೀಕರಿಸಲು ಯೋಜನೆ ರೂಪಿಸಬೇಕಿದೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆ ವರದಿ ಸಿದ್ಧಪಡಿಸಿ, ಪರಿಸರ ಇಲಾಖೆ ಮತ್ತು ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗಿದೆ. ಪರಿಸರ ಸಂರಕ್ಷಿಸಿ, ಗಿಡಗಳನ್ನು ನೆಟ್ಟು ಬೆಳೆಸಬೇಕಿದೆ. ಎಲ್ಲೆಲ್ಲಿ ವಿಷಪೂರಿತ ಗಾಳಿ ಬೀಸುತ್ತಿದೆಯೂ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಆಗಾಗ್ಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವಂತೆ ಮನವೊಲಿಸಬೇಕಿದೆ. ಜನರು ಶುದ್ಧ ಗಾಳಿ ಉಸಿರಾಡುವಂತಾಗಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Last Updated : May 13, 2019, 11:09 AM IST

ABOUT THE AUTHOR

...view details