ದಾವಣಗೆರೆ: ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಅಂದ್ರೆ ಅಲ್ಲಿ ಪ್ರಕೃತಿಗೆ ಧಕ್ಕೆಯಾಗಿರುತ್ತದೆ. ಅಂತಹದ್ದೊಂದು ಕಾಮಗಾರಿ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆಯುತ್ತಿದ್ದು, ಇಡೀ ನಗರಕ್ಕೆ ಜೀವನಾಡಿಯಾಗಿದ್ದ ಕೆರೆ ಈಗ ವಿಷಕಾರಿಯಾಗುತ್ತಿದೆ. ಈ ಕೆರೆಯಲ್ಲಿ ಆಶ್ರಯ ಪಡೆದಿದ್ದ ಲಕ್ಷಾಂತರ ಜಲಚರ ಪ್ರಾಣಿಗಳು ಈಗ ನಶಿಸುವ ಹಂತಕ್ಕೆ ತಲುಪಿದ್ದು, ಈ ಅವೈಜ್ಞಾನಿಕ ಕಾಮಗಾರಿ ವಿರುದ್ದ ಪರಿಸರ ಪ್ರೇಮಿ ಯುವಕರ ತಂಡ ಹೋರಾಟಕ್ಕೆ ನಿಂತಿದ್ದಾರೆ.
ಕುಂದವಾಡ ಕೆರೆ ಏರಿಗೆ ಪ್ಲಾಸ್ಟಿಕ್ ಹೊದಿಕೆ: ಪರಿಸರ ಪ್ರೇಮಿಗಳ ಆಕ್ರೋಶ ದಾವಣಗೆರೆ ನಗರದ ಜೀವನಾಡಿಯಾಗಿರುವ ಕುಂದವಾಡ ಕೆರೆ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಇಡೀ ನಗರಕ್ಕೆ ಜೀವ ಜಲವನ್ನು ಒದಗಿಸುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದು ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದವಾಡ ಕೆರೆಯ ಏರಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಈ ಹೊದಿಕೆಯ ಮೇಲೆ ಕಾಂಕ್ರೀಟ್ ಹಾಕಿ ಬಿಸಿಲಿನ ಝಳಕ್ಕೆ ಪ್ಲಾಸ್ಟಿಕ್ ಕರಗಿ ಅದರ ವಿಷ ನೀರನ್ನು ಸೇರುತ್ತದೆ. ಈ ನೀರನ್ನು ನಗರದ ಜನರು ಕುಡಿಯುವುದರಿಂದ ನಿಧಾನವಾಗಿ ಪ್ಲಾಸ್ಟಿಕ್ ಅಂಶ ಮನುಷ್ಯರ ದೇಹದಲ್ಲಿ ಸೇರುತ್ತದೆ. ಮುಂದಿನ ದಿನಗಳಲ್ಲಿ ನಗರದ ಜನರಿಗೆ ಅಪಾಯ ಎದುರಾಗುತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕುಂದವಾಡ ಕೆರೆಯ ಜೀವವೈವಿಧ್ಯತೆಗೆ ಧಕ್ಕೆ : ಸಾವಿನ ಕದ ತಟ್ಟುತ್ತಿರುವ ಜಲಚರಗಳು
ಕುಂದವಾಡ ಕೆರೆ ಕಾಮಗಾರಿ ಮಾಡಿದಾಗಿನಿಂದಲೂ ಕೂಡ ಅವೈಜ್ಞಾನಿಕವಾಗಿ ಕೆಲಸಗಳು ನಡೆಯುತ್ತಿವೆ. ಕೆರೆ ಅಭಿವೃದ್ಧಿ ಮಾಡುವುದಕ್ಕೆ ಯಾರ ವಿರೋಧ ಕೂಡ ಇಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುವುದು ಸರಿಯಲ್ಲ. ಅಲ್ಲದೆ ಪ್ಲಾಸ್ಟಿಕ್ ಹೊದಿಕೆ ಹಾಕುವುದರಿಂದ ಜೀವರಾಶಿಗಳಿಗೆ ಮಾರಕವಾಗಿದ್ದು, ಲಕ್ಷಾಂತರ ಜಲಚರ ಪ್ರಾಣಿಗಳು ಸಾವನ್ನಪ್ಪುತ್ತವೆ. ಇದರಿಂದ ಪರಿಸರ ಪ್ರೇಮಿಗಳು ಕರ್ನಾಟಕ ಜೀವ ವೈವಿಧ್ಯ ಮಂಡಳಿಗೆ ಸೇರಿದಂತೆ ಹಲವು ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸ್ಥಳ ಪರಿಶೀಲನೆ ನಡೆಸಿದ್ದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ ಎಂದು ವರದಿ ನೀಡಿದೆ.
ಅಲ್ಲದೇ ಒಂದು ಕಾಮಗಾರಿ ಮಾಡುವಾಗ ಸಾರ್ವಜನಿಕ ಸಭೆಯನ್ನು ನಡೆಸಿ ಅಹವಾಲು ಸ್ವೀಕರಿಸಬೇಕು ಅದನ್ನು ಕೂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡಿಲ್ಲ. ಅಲ್ಲದೆ ಎನ್ವರ್ನಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಕೈಗೊಂಡಿಲ್ಲ. ಹಾಗೂ ಪರಿಸರ ಇಲಾಖೆಯ ತಾತ್ವಿಕ ಒಪ್ಪಿಗೆಯನ್ನು ಪಡೆಯದೆ ಕಾಮಗಾರಿ ಮಾಡುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಪರಸರ ಹಾಳು ಮಾಡುವುದರ ಜೊತೆ ಸಾರ್ವಜನಿಕರ ಹಣ ವ್ಯಯವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸ್ಮಾರ್ಟ್ ಸಿಟಿ ಎಂಡಿಯವರನ್ನು ಸಂಪರ್ಕ ಮಾಡಿದರೂ ಯಾವುದೇ ಉತ್ತರ ನೀಡುತ್ತಿಲ್ಲ. ಒಟ್ಟಾರೆಯಾಗಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿರುವುದು ಕಣ್ಣ ಮುಂದೆಯೇ ಇದೆ. ನೈಸರ್ಗಿಕ ಕೆರೆಯನ್ನು ಕಾಂಕ್ರೀಟ್ ತೊಟ್ಟಿಯನ್ನು ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೊರಟಿದ್ದು, ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡುವುದಾಗಿ ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 'ಸ್ಮಾರ್ಟ್ ಸಿಟಿ'ಗಾಗಿ ಕುಂದವಾಡ ಕೆರೆ ಖಾಲಿ: ಅಭಿವೃದ್ಧಿಯಿಂದ ಜೀವ ವೈವಿಧ್ಯಕ್ಕೆ ಧಕ್ಕೆ?