ಹರಿಹರ: ನಗರಸಭೆಯಿಂದ ದೀನ ದಯಾಳ್ ಅಂತ್ಯೋದಯ ಯೋಜನೆ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ನಗರಸಭಾ ಪೌರಾಯುಕ್ತೆ ಎಸ್.ಲಕ್ಷ್ಮೀ ಹೇಳಿದರು.
ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಯೋಜನೆ ರೂಪಿಸಲಾಗುವುದು: ಪೌರಾಯುಕ್ತೆ ಎಸ್.ಲಕ್ಷ್ಮೀ - street vendors
ದೀನ ದಯಾಳ್ ಅಂತ್ಯೋದಯ ಯೋಜನೆ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ನಗರಸಭಾ ಪೌರಾಯುಕ್ತೆ ಎಸ್.ಲಕ್ಷ್ಮೀ ಭರವಸೆ ನೀಡಿದರು.
ಮಹಾತ್ಮ ಗಾಂಧಿ ತರಕಾರಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಮಂಜುಳಾ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಪೌರಾಯುಕ್ತರನ್ನು ಭೇಟಿ ಮಾಡಿ ಈಗ ನಿರ್ಮಿಸುತ್ತಿರುವ ಯೋಜನೆ ಕ್ರಮಬದ್ಧವಾಗಿಲ್ಲ ಎಂದು ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರು, ಮನವಿಯಲ್ಲಿ ಸಂಘದವರು ಮಾಡಿರುವ ದೋಷಗಳು ಯಾವುದೇ ರೀತಿಯಲ್ಲಿ ಇರದಂತೆ ಜಾಗೃತೆ ವಹಿಸಿ ಕಾಮಗಾರಿಯನ್ನು ನಡೆಸಲಾಗುವುದು. ನಿಮ್ಮ ಸಂಘದಲ್ಲಿರುವ ತರಕಾರಿ ವ್ಯಾಪಾರಿಗಳ ಪಟ್ಟಿಯನ್ನು ನಮಗೆ ನೀಡಿ, ಅದರಂತೆ ಎಲ್ಲರಿಗೂ ಸಹ ಮಳಿಗೆಗಳನ್ನು ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮನವಿ ನೀಡಿದ ಬಳಿಕ ಸಂಘದ ಅಧ್ಯಕ್ಷೆ ಡಿ.ಮಂಜುಳ ಮಾತನಾಡಿ, ಇತ್ತೀಚೆಗೆ ಹಳೇ ಟೌನ್ ಹಾಲ್ (ಹಳೇ ಕೋರ್ಟ್) ಆವರಣದಲ್ಲಿ ದೀನ ದಯಾಳ್ ಅಂತ್ಯೋದಯ ಯೋಜನೆಯಡಿಯಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ಮಾಡಲಾಗಿದೆ. ಆದರೆ ಭೂಮಿ ಪೂಜೆ ನಡೆಸಿದ ಸ್ಥಳದಲ್ಲಿ ರಸ್ತೆ ಹಾಗೂ ಇತರೆ ಸೌಕರ್ಯಗಳಿಗೆ ಜಾಗ ಸಾಕಾಗುವುದಿಲ್ಲ. ನಮ್ಮ ಸಂಘದ ಗಮನಕ್ಕೆ ತರದೇ ಏಕಾಏಕಿ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ನಡೆಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಎಲ್ಲಾ ಸೌಲಭ್ಯವುಳ್ಳ ವಿಶಾಲವಾದ ಮಾರುಕಟ್ಟೆ ನಿರ್ಮಾಣಕ್ಕೆ ಸಂಘದಿಂದ ನಾವುಗಳು ಒತ್ತಾಯಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.