ದಾವಣಗೆರೆ : ಅಮರನಾಥ ಯಾತ್ರೆಗೆ ತೆರಳಿದ್ದ ದಾವಣಗೆರೆಯ ಒಟ್ಟು ಒಂಬತ್ತು ಜನರ ಪೈಕಿ ನಾಲ್ಕು ಜನ ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದಾರೆ. ಕಳೆದ ರಾತ್ರಿ ದಾವಣಗೆರೆಗೆ ಆಗಮಿಸಿದ ನಾಲ್ಕು ಜನ ಅಲ್ಲಿ ನಡೆದಂತಹ ದುರಂತಗಳನ್ನು ಬಿಚ್ಚಿಟ್ಟಿದ್ದಾರೆ. ಅಮರನಾಥ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತ, ಹವಾಮಾನ ವೈಪರಿತ್ಯ ಹಾಗೂ ಮಳೆಯಿಂದ ಆದ ಅನಾಹುತಗಳನ್ನು ನಾಲ್ಕು ಜನ ಮಹಿಳೆಯರು ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಮರನಾಥ ಯಾತ್ರೆಗೆ ಹೋಗಿದ್ದ ದಾವಣಗೆರೆಯ ಯಾತ್ರಿಗಳು ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದಾರೆ. ಈಟಿವಿ ಭಾರತದೊಂದಿಗೆ ಅಲ್ಲಿ ಜರುಗಿದ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ. ದಾವಣಗೆರೆಯ ವಿವಿಧ ಬಡಾವಣೆಯಲ್ಲಿರುವ ಗೀತಾ, ಚಂದ್ರಿಕಾ, ಪುಷ್ಪ, ಉಷಾ ಈ ನಾಲ್ಕು ಜನ ಸೇರಿ ಅಮರನಾಥ ಯಾತ್ರೆಗೆ ತೆರಳಿದ್ದರು. ಈ ನಾಲ್ಕು ಜನರು ಸ್ನೇಹಿತರಾಗಿದ್ದು, ನಾಲ್ಕು ಜನ ಮಹಿಳೆಯರು ದಾವಣಗೆರೆಯಿಂದ ಜೂನ್ 30 ರಂದು ಅಮರನಾಥ ಯಾತ್ರೆಗೆ ತೆರಳಿದ್ದರು. ಜುಲೈ 6 ರಂದೇ ಅಮರನಾಥ ದರ್ಶನ ಮುಗಿಸಿ ಬೇಸ್ ಕ್ಯಾಂಪ್ಗೆ ತೆರಳಿದ್ದರು. ಅವರು ಅಮರನಾಥನ ದರ್ಶನ ಪಡೆದು ವಾಪಸ್ ಬಂದ ಎರಡು ಗಂಟೆಯಲ್ಲಿ ಹವಾಮಾನ ವೈಪರೀತ್ಯ ಸ್ಥಿತಿ ಉಂಟಾಗಿದೆ. ಈ ವೇಳೆ, ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದರಂತೆ. ಆ ಭೋಲೆನಾಥ್ ದೇವರ ದಯೆಯಿಂದ ನಾಲ್ಕು ಜನ ಸುರಕ್ಷಿತವಾಗಿ ವಾಪಸ್ ಬಂದಿದ್ದೇವೆ ಎಂದು ಕಣ್ಣೀರಿಟ್ಟರು.
ಇನ್ನು ವಿಪರೀತ ಮಳೆಯಿಂದ ಭೂ ಕುಸಿತ ಉಂಟಾಗಿದ್ದರಿಂದ ಬಿಎಸ್ಎಫ್ ಆರ್ಮಿಯವರು ಹಾಗೂ ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿಯವರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅದರಲ್ಲೂ ದಾವಣಗೆರೆಗೆ ವಾಪಸ್ ಆದ ನಾಲ್ಕು ಜನ ಮಹಿಳೆಯರು ಈಶ್ವರನ ದರ್ಶನ ಮುಗಿಸಿ ಬೇಗಾ ವಾಪಸ್ ಆಗಿದ್ದಕ್ಕಾಗಿ ಬಚಾವ್ ಆಗಿದ್ದಾರೆ.
ಅಮರನಾಥ ಯಾತ್ರಾರ್ಥಿಗಳು ಹೇಳೋದೇನು ?: ದಾವಣಗೆರೆಯಿಂದ ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿದ್ದ ನಾಲ್ವರ ಪೈಕಿ ಪುಷ್ಪ ಅವರು ಮಾತನಾಡಿ, ಬೆಂಗಳೂರಿನಿಂದ ಜೂನ್ 30 ಕ್ಕೆ ತೆರಳಿದ್ದೆವು. ಮೊದಲು ವೈಷ್ಣವಿ ದೇವಿಯ ದೇವಾಲಯಕ್ಕೆ ತೆರಳಿ, ರಾಮ್ ಬನ್ ಎಂಬ ಪ್ರದೇಶದಲ್ಲಿ ಉಳಿದುಕೊಂಡೆವು. ನಾವು ಮೊದಲೇ ನಾಲ್ಕು ಜನ ಮಹಿಳೆಯರು ಶ್ರೀ ನಗರಕ್ಕೆ ತೆರಳಿದ ಬಳಿಕ ಕೆವೈಸಿ ಕೂಡ ಸಿಗಲಿಲ್ಲ. ಆದ್ದರಿಂದ ಮೂರು ದಿನಗಳ ಕಾಲ ಬೇಸ್ ಕ್ಯಾಂಪ್ನಲ್ಲಿ ಉಳಿದುಕೊಂಡೆವು. ಬೆಳಗಿನ ಜಾವ 04 ಡೋಲಿ ಮೂಲಕ ಅಮರನಾಥ ಯಾತ್ರೆ ಆರಂಭಿಸಿದೆವು. ಅಲ್ಲಿಗೆ 11 ಗಂಟೆಗೆ ತೆರಳಿ ದರ್ಶನ ಪಡೆದೆವು.