ಹರಿಹರ:ನಗರದ ಕಾಳಿದಾಸ ನಗರ 3ನೇ ಕ್ರಾಸ್‌ನ ಅಂಜುಮನ್ ಶಾದಿ ಮಹಲ್ ಸಮೀಪ ಇಬ್ಬರು ಬಾಲಕರ ಮೇಲೆ ಹಂದಿಗಳು ದಾಳಿ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. 1 ವರ್ಷದ ಕೌಶಿಕ್ ಹಾಗೂ 3 ವರ್ಷದ ಪರ್ಹಾನ್ ಎಂಬ ಬಾಲಕರು ಗಾಯಗೊಂಡಿದ್ದಾರೆ.
ಮನೆಯ ಮುಂದೆ ಶನಿವಾರ ಬೆಳಿಗ್ಗೆ ಉಪಹಾರ ಸೇವಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಹಂದಿಗಳು, ಮಕ್ಕಳ ತೊಡೆ ಹಾಗೂ ಬೆನ್ನಿಗೆ ಕಚ್ಚಿ ಗಾಯಗೊಳಿಸಿವೆ. ಹಂದಿಗಳ ದಾಳಿಯಿಂದ ಮಕ್ಕಳನ್ನು ರಕ್ಷಿಸಿದ ಸ್ಥಳೀಯರು, ಮಕ್ಕಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಗರಸಭೆ ಸದಸ್ಯ ಮಹಬೂಬ್ ಬಾಷಾ ಮಾತನಾಡಿ, ಕಾಳಿದಾಸ ಹಾಗೂ ಬೆಂಕಿನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಅನೇಕ ಬಾರಿ ಹಂದಿಗಳನ್ನು ಸ್ಥಳಾಂತರಿಸುವಂತೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಈ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. 20 ದಿನಗಳ ಹಿಂದೆ ನೇಹಾ ಎಂಬ ಬಾಲಕಿಯ ಮೇಲೆ ಹಂದಿಗಳು ದಾಳಿ ನಡೆಸಿದ್ದವು. ಆರೋಗ್ಯ ನಿರೀಕ್ಷಕರಿಗೆ ಈ ಬಗ್ಗೆ ದೂರು ನೀಡಲಾಗಿತ್ತು.
ಮಕ್ಕಳ ಮೇಲೆ ದಾಳಿ ನಡೆಸಿದ ಹಂದಿಗಳು ಎಚ್ಚೆತ್ತ ನಗರಸಭೆ:
ನಗರದಲ್ಲಿ ಶನಿವಾರ ಮಕ್ಕಳ ಮೇಲೆ ನಡೆದ ಹಂದಿ ದಾಳಿಯಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ನಗರಸಭೆ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸುವ ಮೂಲಕ ನೂರಾರು ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಲಾಗಿದೆ.