ದಾವಣಗೆರೆ:ಮನೆ ಹಾಗೂ ಆಸ್ತಿ ವಿಚಾರ ಹಿನ್ನೆಲೆಯಲ್ಲಿ ತಮ್ಮನೋರ್ವ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಆಸ್ಪತ್ರೆಯಲ್ಲಿ ನಡೆದಿದೆ. ಹರಿಹರದ ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು, ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮನ ಕೊನೆಯ ಮಗನಾದ ಕುಮಾರ್ ಕೆ.ಜಿ ಅವರೊಂದಿಗೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಇವರಿಬ್ಬರ ಮಧ್ಯೆ ಮನಸ್ತಾಪವಿದ್ದು ಪದೇಪದೇ ಸಣ್ಣಪುಟ್ಟ ಜಗಳ ನಡೆಯುತ್ತಿದ್ದವು. ಭಾನುವಾರ ರಾತ್ರಿ ದಾವಣಗೆರೆಯಿಂದ ಹರಿಹರಕ್ಕೆ ವಾಪಸ್ ಬರುತ್ತಿರುವ ಮಾರ್ಗ ಮಧ್ಯೆ ಕುಮಾರ್ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವರು ಹಲ್ಲೆ ಮಾಡಿದ್ದಾರೆ. ಕೂಡಲೇ ಕುಮಾರ್ನನ್ನು ಹರಿಹರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ ಆರೋಪಿ ರಾಜು ಈ ವೇಳೆ ಆಸ್ಪತ್ರೆಗೆ ಬಂದು ಕುಮಾರ್ ಮೇಲೆ ಮತ್ತೆ ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾನೆ. ತೀವ್ರ ರಕ್ತಸಾವ್ರದಿಂದ ಕುಮಾರ್ ಅವರನ್ನು ದಾವಣಗೆರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.