ದಾವಣಗೆರೆ:ಅಪರಿಚಿತ ವ್ಯಕ್ತಿಯೊಬ್ಬನು ಲೋಕಾಯುಕ್ತ ಸೋಗಿನಲ್ಲಿ ನ್ಯಾಮತಿ ತಾಲೂಕು ತಹಶಿಲ್ದಾರ್ಗೆ ಫೋನ್ ಮಾಡಿ, ನಿಮ್ಮ ಹೆಸರಿನಲ್ಲಿ ಎಫ್ ಐಆರ್ ದಾಖಲಾಗಿದೆ. ದಾಳಿ ಆಗದಂತೆ ತಡೆಗೆ ಅನ್ಲೈನ್ನಲ್ಲಿ ಹಣ ಹಾಕುವಂತೆ ಬೇಡಿಕೆ ಇಟ್ಟಿದ್ದಾನೆ. ತಹಶಿಲ್ದಾರ್ ಹಣ ಹಾಕದಿದ್ದಾಗ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಲೋಕಾಯುಕ್ತರೆಂದು ವ್ಯಕ್ತಿ ಫೋನ್ ಕರೆ: ಅಪರಚಿತ ವ್ಯಕ್ತಿ ನ್ಯಾಮತಿ ತಾಲೂಕು ತಹಶಿಲ್ದಾರ್ಗೆ ಕರೆ ಮಾಡಿ, ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡು, ತಹಶಿಲ್ದಾರರ ವಿವರ ಪಡೆದಿದ್ದಾನೆ. ನಿಮ್ಮ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಸ್‌ಪಿ ಮತ್ತು ಅವರ ಸಿಬ್ಬಂದಿ ಈಗಾಗಲೇ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಫೋನಿನಲ್ಲಿ ನಂಬಿಸಿದ್ದಾನೆ.